Tuesday, May 14, 2024
Homeಕರಾವಳಿಕಾಸರಗೋಡಿನ ಯುವಕನ ಅಪಹರಣ : ಜೀವದ ಹಂಗು ತೊರೆದು ಯುವಕನನ್ನು ರಕ್ಷಿಸಿದ ಹಾಸನ ಪೊಲೀಸರು,...

ಕಾಸರಗೋಡಿನ ಯುವಕನ ಅಪಹರಣ : ಜೀವದ ಹಂಗು ತೊರೆದು ಯುವಕನನ್ನು ರಕ್ಷಿಸಿದ ಹಾಸನ ಪೊಲೀಸರು, ವಿಡಿಯೋ ವೈರಲ್

spot_img
- Advertisement -
- Advertisement -

ಹಾಸನ:  ಕೇರಳದ ಕಿಡ್ನಾಪರ್ಸ್​ಗಳನ್ನು ಬೆನ್ನಟ್ಟಿದ ಹಾಸನ ಜಿಲ್ಲಾ ಪೊಲೀಸರು, ಅಪಹರಣಕ್ಕೊಳಗಾಗಿದ್ದ ಯುವಕನನ್ನು ಚಲಿಸುತ್ತಿದ್ದ ಕಾರಿನಿಂದ ರಕ್ಷಿಸಿದ್ದಲ್ಲದೆ, ಆರೋಪಿಯೊಬ್ಬನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕೇರಳದ ಕಾಸರಗೋಡಿನಲ್ಲಿ ಬೇಕಲ್ ಪಟ್ಟಣದ ನಿವಾಸಿ ಅನ್ವರ್ ಕಪರ್ಟ್(33) ಎಂಬಾತನ್ನು ನಿನ್ನೆ ಅಪಹರಿಸಲಾಗಿತ್ತು. ಸಿಲ್ವರ್ ಬಣ್ಣದ ಹುಂಡೈ ಕ್ರೆಟಾ ಎಸ್​ಯುವಿಯಲ್ಲಿ ಆತನನ್ನು ಬೆಂಗಳೂರಿನ ಕಡೆಗೆ ಕರೆದೊಯ್ಯಲಾಗುತ್ತಿದೆ ಎನ್ನುವ ಮಾಹಿತಿಯನ್ನು ಕೇರಳ ಪೊಲೀಸರು ರವಾನಿಸಿದ್ದರು. ಕಾಸರಗೋಡು ಪೊಲೀಸರೊಂದಿಗೆ ಹಾಸನ ಜಿಲ್ಲಾ ಪೊಲೀಸರು ಸಮನ್ವಯ ಸಾಧಿಸಿದ್ದರು. ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಕುಳಿತು ಕಾರು ಸಾಗುವ ಮಾರ್ಗವನ್ನು ಅಪಹರಣಕ್ಕೊಳಗಾಗಿದ್ದವನ ಮೊಬೈಲ್ ನೆಟ್​ವರ್ಕ್ ಆಧರಿಸಿ ಕಣ್ಗಾವಲಿನಲ್ಲಿರಿಸಿದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ನಂದಿನಿ, ಸಕಲೇಶಪುರದಲ್ಲಿಯೇ ಕಾರು ತಡೆಯುವ ಯೋಜನೆ ರೂಪಿಸಿ, ಅಲ್ಲಿನ ಠಾಣೆಗೆ ಸಂದೇಶ ರವಾನಿಸಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಸಕಲೇಶಪುರ ಪೊಲೀಸರು ಬ್ಯಾರಿಕೇಡ್ ಇರಿಸಿ ಟೋಲ್​ಗೇಟ್ ಬಳಿ ಕಾರು ತಡೆಯಲು ಸಿದ್ಧವಾಗಿದ್ದರು. ಆದರೆ ವೇಗವಾಗಿ ಬಂದ ಕಿಡ್ನಾಪರ್​ಗಳ ಕಾರು ಬ್ಯಾರಿಕೇಡ್ ಅನ್ನು ಗುದ್ದಿ ಬೀಳಿಸಿ ಹಾಸನದ ಕಡೆಗೆ ಹೋಗಿತ್ತು.

ಬಳಿಕ ಅದನ್ನು ಅಲ್ಲಿನ ಪೊಲೀಸರು ಬೆನ್ನಟ್ಟುವ ಜತೆಗೆ, ಅವರ ವಾಹನ ತಡೆಯಲು ಸಿದ್ಧತೆ ನಡೆಸುವಂತೆ ಆಲೂರು ಠಾಣೆಗೆ ಸಂದೇಶ ರವಾನಿಸಲಾಯಿತು. ಆಲೂರು ಪೊಲೀಸರು ತಮಗೆ ಸಿಕ್ಕ ಕಡಿಮೆ ಸಮಯದಲ್ಲಿಯೇ ಕಾರು ತಡೆಯಲು ಬ್ಯಾರಿಕೇಡ್ ಅಡ್ಡವಿರಿಸಿದ್ದರು. ಅಲ್ಲಿ ವಾಹನದ ವೇಗ ತಗ್ಗಿಸಿದ ಚಾಲಕ ಏಕಾಏಕಿ ವೇಗ ಹೆಚ್ಚಿಸಿಕೊಂಡು ಪೊಲೀಸರ ಮೇಲೆಯೇ ಕಾರು ಹರಿಸಲು ಯತ್ನಿಸಿದ. ಆಗ ತಮ್ಮ ಜೀವ ಉಳಿಸಿಕೊಳ್ಳಲು ಪೊಲೀಸರು ರಸ್ತೆ ಬದಿಗೆ ನೆಗೆದಿದ್ದಾರೆ. ಆ ಸಮಯವನ್ನು ಬಳಕೆ ಮಾಡಿಕೊಂಡ ಚಾಲಕ ಹಾಸನ ಮಾರ್ಗವಾಗಿ ಮುಂದೆ ಸಾಗಿದ್ದಾನೆ.


ಅಪಹರಣಕಾರರು ಗೊರೂರು ರಸ್ತೆ ಮೂಲಕ ಸಾಗುತ್ತಿರುವುದನ್ನು ಪತ್ತೆ ಮಾಡಿದ ಎಎಸ್​ಪಿ, ಈ ಬಗ್ಗೆ ಗೊರೂರು ಪೊಲೀಸರಿಗೆ ಮಾಹಿತಿ ರವಾನಿಸಿದರು. ಸಕಲೇಶಪುರ ಹಾಗೂ ಬೈರಾಪುರದಲ್ಲಿ ಬ್ಯಾರಿಕೇಡ್ ದಾಟಿಕೊಂಡು ಕಾರು ಮುನ್ನುಗ್ಗಿದ್ದರಿಂದ ಹೆಚ್ಚು ಎಚ್ಚರ ವಹಿಸಿದ ಪಿಎಸ್​ಐ ಸಾಗರ್, ಸಿಬ್ಬಂದಿ ಸಹಕಾರದೊಂದಿಗೆ ಜೆಸಿಬಿ ಹಾಗೂ ಒಂದು ಲಾರಿಯನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ಕಾದು ನಿಂತರು. ವೇಗವಾಗಿ ಬಂದ ಅಪಹರಣಕಾರರ ಕಾರು ಮುಂದೆ ಚಲಿಸಲು ಜಾಗವಿಲ್ಲದ್ದರಿಂದ ನಿಧಾನಗೊಂಡಿತು.

ರಸ್ತೆಯ ಎರಡೂ ಬದಿಯನ್ನು ಬಂದ್ ಮಾಡಿದ್ದ ಪೊಲೀಸರು, ಕಾರು ಡಿವೈಡರ್ ದಾಟಿ ವಾಪಸ್ ಹೋಗಲು ಅವಕಾಶವಿದೆ ಎನ್ನುವುದನ್ನು ಮರೆತು ಆ ಭಾಗವನ್ನು ಖಾಲಿ ಬಿಟ್ಟಿದ್ದರು. ಆ ಜಾಗವನ್ನು ಉಪಯೋಗಿಸಿಕೊಂಡ ಚಾಲಕ ಕಾರನ್ನು ಡಿವೈಡರ್ ದಾಟಿಸಿ ಬಲಕ್ಕೆ ಹೊರಳಿಸಲು ಮುಂದಾದ ತಕ್ಷಣ ಕಾರಿನ ಬಳಿಗೆ ಓಡಿದ ಸಿಬ್ಬಂದಿ, ಹಿಂಬದಿ ಬಾಗಿಲನ್ನು ತೆಗೆದು ಅಲ್ಲಿ ಕುಳಿತಿದ್ದ ಅನ್ವರ್ ಕಪರ್ಟ್​ನನ್ನು ಹೊರಗೆಳೆದುಕೊಂಡು ರಕ್ಷಿಸಿದರು. ಆದರೆ ಅಪಹರಣಕಾರರು ಕಾರು ಸಮೇತ ಪರಾರಿಯಾದರು. ಆದರೂ ಅವರನ್ನು ಬೆನ್ನಟ್ಟಿದಾಗ ಕಾರನ್ನು ಬನವಾಸೆ ಗ್ರಾಮದ ಬಳಿ ಬಿಟ್ಟು ಆರೋಪಿಗಳು ಓಡಿ ಹೋಗಿದ್ದರು. ಕಾರ್ಯಾಚರಣೆ ಮುಂದುವರಿಸಿದ ಪೊಲೀಸರು, ಒಬ್ಬ ಅಪಹರಣಕಾರನನ್ನು ಪತ್ತೆಹಚ್ಚಿ ವಶಕ್ಕೆ ಪಡೆಯಲು ಯಶಸ್ವಿಯಾಗಿದ್ದಾರೆ.

ಅನ್ವರ್​ನೊಂದಿಗೆ ಹಣಕಾಸು ವಿಷಯದಲ್ಲಿ ವಿವಾದ ಹೊಂದಿದ್ದ ವ್ಯಕ್ತಿಗಳೇ ಆತನನ್ನು ದುಷ್ಕರ್ವಿುಗಳ ಮೂಲಕ ಅಪಹರಿಸಿ, ಒತ್ತೆಯಾಳಾಗಿಟ್ಟು ಹಣ ವಸೂಲಿ ಮಾಡುವ ಉದ್ದೇಶ ಹೊಂದಿದ್ದರು ಎನ್ನಲಾಗಿದೆ. ಕಾಸರಗೋಡಿನ ಬೇಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

- Advertisement -
spot_img

Latest News

error: Content is protected !!