ಬೆಳ್ತಂಗಡಿ: ಕೊರೋನಾ ಲಾಕ್ ಡೌನ್ ನಿಂದಾಗಿ ದೇಶಾದ್ಯಂತ ಕೃಷಿಕರಿಗೆ ಸಮಸ್ಯೆಯಾಗಿದ್ದು, ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಕೃಷಿ ಉತ್ಪನ್ನ ಮಾರುಕಟ್ಟೆ, ಕ್ಯಾಂಪ್ಕೋ, ರಬ್ಬರ್ ಬೆಳೆಗಾರರ ಸಹಕಾರಿ ಸಂಘಗಳ ಅವಶ್ಯಕತೆ ಇದೆ. ರೈತರ ಸಮಸ್ಯೆಗೆ ಸರಕಾರ ತಕ್ಷಣ ಸ್ಪಂದಿಸಬೇಕು ಎಂದು ನಗರ ಮತ್ತು ಗ್ರಾಮೀಣ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ತಹಸೀಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಲಾಕ್ಡೌನ್ ನಿಂದಾಗಿ ಈಗಾಗಲೇ ಕೋಟ್ಯಂತರ ಜನರ ಬದುಕು ಬರ್ಬರವಾಗಿದೆ. ವಲಸೆ ಕಾರ್ಮಿಕರು, ಕೂಲಿ ಕಾರ್ಮಿಕರು, ಕಟ್ಟಡ ನಿರ್ಮಾಣ ಕಾರ್ಮಿಕರು, ಸೇರಿದಂತೆ ಬೆವರು ಸುರಿಸಿ ದುಡಿಯುವ ವರ್ಗದ ಜೀವನ ಅತ್ಯಂತ ಕಷ್ಟಕರವಾಗಿದೆ. ಈ ನಿಟ್ಟಿನಲ್ಲಿ ರೈತರ ಉತ್ಪನ್ನಗಳಾದ ಅಡಿಕೆ, ತೆಂಗು, ರಬ್ಬರ್, ಕೊಕೊ, ಗೇರುಬೀಜಗಳನ್ನು ಕ್ಯಾಂಪ್ಕೋ, ರಬ್ಬರ್ ಬೆಳೆಗಾರರ ಸಹಕಾರಿ ಸಂಘದ ಮೂಲಕ ಖರೀದಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ಮನವಿ ಸ್ವೀಕರಿಸಿ ಮಾತನಾಡಿದ ಬೆಳ್ತಂಗಡಿ ತಹಸೀಲ್ದಾರ್ ಗಣಪತಿ ಶಾಸ್ತ್ರೀ ಅವರು, ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಎಪಿಎಂಸಿ, ಕ್ಯಾಂಪ್ಕೋ ಹಾಗೂ ರಬ್ಬರ್ ಬೆಳೆಗಾರರ ಸಹಕಾರಿ ಸಂಘದ ಮೂಲಕ ಸೂಕ್ತ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.
ಮನವಿ ನೀಡಿದ ನಿಯೋಗದಲ್ಲಿ ಮಾಜಿ ಶಾಸಕ ವಸಂತ ಬಂಗೇರ, ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜನ್ ಜಿ. ಗೌಡ, ನಗರ ಬ್ಲಾಕ್ ಅಧ್ಯಕ್ಷ ಶೈಲೇಶ್ ಕುಮಾರ್ ಕುತ್ರೊಡಿ, ಕೆಪಿಸಿಸಿ ಸಾಮಾಜಿಕ ಜಾಲತಾಣ ಅಧ್ಯಕ್ಷ ಅನಿಲ್ ಪೈ ಬಂಗಾಡಿ, ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ಎಸ್ಸಿ ಘಟಕದ ಅಧ್ಯಕ್ಷ ಬಿ.ಕೆ. ವಸಂತ್, ಮಾಜಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಚಂದು ಎಲ್, ಅಲ್ಪಸಂಖ್ಯಾತ ಘಟಕದ ಮಾಜಿ ಅಧ್ಯಕ್ಷ ಖಾಲೀದ್, ರಹೀಮಾನ್ ಪಡ್ಪು, ಅಜಯ್ ಎ.ಜೆ., ಪ.ಪಂ. ಸದಸ್ಯ ಜಗದೀಶ್ ಡಿ. ಸೇರಿದಂತೆ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು