ಬೆಂಗಳೂರು: ಅಗತ್ಯ ವಸ್ತು ಸಾಗಿಸುವ ವಾಹನಗಳ ಚಾಲಕರಿಗೆ ತೊಂದರೆ ನೀಡುತ್ತಿದ್ದ ಪೊಲೀಸರು, ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಬೆಂಗಳೂರು ಗ್ರಾಮಾಂತರ ಪೊಲೀಸ್ ಅಧೀಕ್ಷಕ ರವಿ ಡಿ. ಚನ್ನಣ್ಣನವರ್ ತರಾಟೆಗೆ ತೆಗೆದುಕೊಂಡಿದ್ದಾರೆ.
ತಡರಾತ್ರಿ ಮಫ್ತಿಯಲ್ಲಿ ಲಾರಿ ಚಾಲನೆ ಮಾಡಿಕೊಂಡು ಪರಿಶೀಲನೆಗೆ ತೆರಳಿದ್ದ ರವಿ ಚನ್ನಣ್ಣನವರ್ ಅತ್ತಿಬೆಲೆ, ಆನೇಕಲ್, ಕುಣಿಗಲ್ ರಸ್ತೆ, ನೆಲಮಂಗಲ, ಡಾಬಸ್ ಪೇಟೆ, ನೈಸ್ ರಸ್ತೆ ಸೇರಿ ಹಲವೆಡೆ ಪರಿಶೀಲನೆ ನಡೆಸಿದ್ದಾರೆ. ಚಾಲಕರಿಗೆ ವಿನಾಕಾರಣ ತೊಂದರೆ ಕೊಡುತ್ತಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಲಾಕ್ ಡೌನ್ ಜಾರಿಯಾಗಿರುವುದರಿಂದ ಅಗತ್ಯ ವಸ್ತುಗಳ ಸಾಗಾಟಕ್ಕೆ ಮಾತ್ರ ವಾಹನಗಳ ಬಳಕೆಯಾಗುತ್ತಿವೆ. ಇಂತಹ ವಾಹನಗಳಿಗೆ ಕೆಲವರು ಅನಗತ್ಯವಾಗಿ ಕಿರುಕುಳ ನೀಡುತ್ತಿರುವ ಬಗ್ಗೆ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ರವಿ ಚನ್ನಣ್ಣನವರ್ ಮಫ್ತಿಯಲ್ಲಿ ತೆರಳಿದ್ದು ಚಾಲಕರಿಂದ ಹಣ ವಸೂಲಿ ಮಾಡುತ್ತಿದ್ದ ಆರ್.ಟಿ.ಒ. ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.