ಬೆಳ್ತಂಗಡಿ: ತಣ್ಣೀರುಪಂತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಾಯ ಗ್ರಾಮದ ಕಲ್ಲೇರಿ ಜನತಾ ಕಾಲೋನಿಗೆ ಶುಕ್ರವಾರ ಭೇಟಿ ನೀಡಿದ ಶಾಸಕ ಹರೀಶ್ ಪೂಂಜ ಆಹಾರ ಸಾಮಾಗ್ರಿ ಕಿಟ್ ವಿತರಣೆ, ಕೊಳವೆ ಬಾವಿ ಕೊರೆಯಲು ಸೂಚನೆ ಸಹಿತ ಕೆಲವೊಂದು ಅಗತ್ಯ ಸೌಕರ್ಯವನ್ನು ಒದಗಿಸಿಕೊಟ್ಟರು. ಇಲ್ಲಿನ ಯುವಕನೊರ್ವನಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಇಲ್ಲಿನ 88 ಮನೆಗಳು ಹೋಂ ಕ್ವಾರೆಂಟೆನ್ಲ್ಲಿದೆ. ಈತನ ಸಂಪರ್ಕದಲ್ಲಿದ್ದ ಒಂದೇ ಮನೆಯ ಒಂಬತ್ತು ಜನ ಸೇರಿದಂತೆ ಒಟ್ಟು 20 ಮಂದಿಗೆ ಹೋಂ ಕ್ವಾರೆಂಟೆನ್ ವಿಧಿಸಲಾಗಿದೆ.
ಆಹಾರ ಸಾಮಾಗ್ರಿ ಸಾಗಾಟ, ಮೂರು ಕಡೆ ಗೇಟುಗಳಲ್ಲಿ ಕರ್ತವ್ಯ ನಿರ್ವಹಿಸಲು, ಔಷಧಿ ಹಾಗೂ ಅಂಬುಲೈನ್ಸ್‌ನಲ್ಲಿ, ಹೆಲ್ತ್ ಡೆಸ್ಕ್‌ನಲ್ಲಿ, 88 ಮನೆಗಳಿಗೆ ಆಹಾರ ಸಾಮಾಗ್ರಿ ಕೊಡಲು ಸೇರಿದಂತೆ ಇಲ್ಲಿನ ಗ್ರಾಪಂನ ಮೇಲುಸ್ತುವಾರಿ ಹೈ ರಿಸ್ಕ್ ಸ್ವಯಂಸೇವಕರಾಗಿ 22 ಮಂದಿ ಈ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ.
ಶಾಸಕರಿಂದ 1.25 ಲಕ್ಷ ರೂ
ಆಂಬುಲೆನ್ಸ್ ವ್ಯವಸ್ಥೆ, ಅಗತ್ಯ ಔಷಧಿ, ಲಾಕ್ ಡೌನ್ ಆದ ಪ್ರದೇಶದಲ್ಲಿ ಸ್ವಯಂ ಪ್ರೇರಣೆಯಿಂದ ದುಡಿಯುತ್ತಿರುವ ಸ್ವಯಂಸೇವಕರ ಊಟದ ವ್ಯವಸ್ಥೆ ಮತ್ತು ಪಂಚಾಯಿತಿಗೆ ಒಟ್ಟು 1.25 ಲಕ್ಷ ರೂ.ವನ್ನು ಶಾಸಕರು ನೀಡಿದ್ದಾರೆ. ಹಾಗೆಯೇ ಜನತಾ ಕಾಲೋನಿಗೆ ನೀರಿನ ಸಮಸ್ಯೆಗೆ ಸ್ಪಂದಿಸಿ ಕೊಳವೆ ಬಾವಿ ತೆಗೆಯಲು ಶಾಸಕರು ಸೂಚನೆ ನೀಡಿದ್ದಾರೆ.
ಭೇಟಿ ನೀಡಿದ ಸಂದರ್ಭ ಇಲ್ಲಿನ ಸ್ಥಳೀಯಾಡಳಿತ, ಸ್ವಯಂ ಸೇವಕರ ಜತೆ ಚರ್ಚಿಸಿ, ಅಗತ್ಯತೆ ಸಹಕಾರ ನೀಡುವುದುದಾಗಿ ಭರವಸೆ ನೀಡಿದರು. ಶಾಸಕ ಹರೀಶ್ ಪೂಂಜ ಅವರ ಮನವಿಗೆ ಸ್ಪಂದಿಸಿದ ಬಂಜಾರ ಗ್ರೂಫ್‌ನ ಪ್ರಕಾಶ್ ಶೆಟ್ಟಿ ಅವರು ತಣ್ಣೀರುಪಂತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲೇರಿ ಜನತಾ ಕಾಲೋನಿಗೆ ಒಂದು ಮನೆಗೆ ಹತ್ತು ಕೆ.ಜಿ. ಅಕ್ಕಿ ಹಾಗೂ ದಿನಸಿ ಸಾಮಾಗ್ರಿಗಳ 100 ಕಿಟ್‌ಗಳನ್ನು ನೀಡಿದ್ದಾರೆ.
ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯವಿಕ್ರಮ, ಪಿಡಿಒ ಪೂರ್ಣಿಮಾ, ಸದಸ್ಯ ಆದಂ, ಅಯೂಬ್, ತಾಜುದ್ದೀನ್, ನವೀನ್ ಕುಮಾರ್, ಬಾರ್ಯ ಸಿಎ ಬ್ಯಾಂಕಿನ ಅಧ್ಯಕ್ಷ ಸುಬ್ರಹ್ಮಣ್ಯ ಗೌಡ ಕೆ.ಆರ್., ಮಹೇಶ್ ಜೆಂತ್ಯಾರು, ಸ್ವಯಂ ಸೇವಕರ ತಂಡದ ಪ್ರಮುಖರಾದ ನಿಝಾರ್, ಅಶ್ರಫ್, ನಮಾಜ್ ಮತ್ತು ತಂಡದ ಸ್ವಯಂ ಸೇವಕರು ಇದ್ದರು.