ಮಂಗಳೂರು: ನಗರದ ವ್ಯಕ್ತಿಯೊಬ್ಬರ ಕ್ರೆಡಿಟ್ ಕಾರ್ಡ್ ಮಾಹಿತಿ ಕದ್ದು, ಅವರ ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸಿಕೊಂಡು ವಂಚನೆ ಮಾಡಿರುವ ಆರೋಪದಲ್ಲಿ ಇಬ್ಬರು ಟಿಬೇಟಿಯನ್ ಪ್ರಜೆಗಳನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಉತ್ತರ ಕನ್ನಡದ ಮುಂಡುಗೋಡು ಟಿಬೆಟಿಯನ್ ಕಾಲನಿಯ ಶರಗಡನ್ ಮೊನಸ್ಟ್ರಿಯ ಲೋಬಸಂಗ್ ಸಂಗೈ (24) ಹಾಗೂ ದಕಪ ಪುಂದೇ (40) ಎಂದು ಗುರುತಿಸಲಾಗಿದೆ.
ಮಂಗಳೂರು ವೈದ್ಯನಾಥ ನಗರದ ನಿವಾಸಿ ಸಿ.ಡಿ. ಅಲೆಕ್ಸಾಂಡರ್ ಎಂಬುವರು ಎಸ್ ಬಿ ಐ ಬ್ಯಾಂಕ್ ನ ಕ್ರೆಡಿಟ್ ಕಾರ್ಡ್ ಅನ್ನು ಮೂರು ವರ್ಷದಿಂದ ಬಳಸುತ್ತಿದ್ದರು. ಮಾರ್ಚ್ 23ರಂದು ಬ್ಯಾಂಕ್‌ಗೆ ಆ ಕಾರ್ಡ್ ಅನ್ನು ಸರೆಂಡರ್ ಮಾಡಿದ್ದರು. ಆದರೆ ಮಾರ್ಚ್ 27 ರಂದು ಅವರ ಖಾತೆಯಿಂದ ಯಾರೋ ಅಪರಿಚಿತರು ₹1.12 ಲಕ್ಷ ಬೇರೆ ಬೇರೆ ಖಾತೆಗೆ ವರ್ಗಾಯಿಸಿರುವುದು ಬ್ಯಾಂಕ್ ಸ್ಟೇಟ್‌ಮೆಂಟ್‌ನಲ್ಲಿ ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಅವರು ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ತನಿಖೆ ಆರಂಭಿಸಿದ ಪೊಲೀಸರಿಗೆ ಮೊಬೈಲ್‌ನ ವಿಕಿ ವಾಲೆಟ್ ಆಯಪ್ ಮೂಲಕ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ಫಿನ್ ಕೇರ್ ಸ್ಮಾಲ್ ಫೈನ್ಯಾನ್ಸ್ ಬ್ಯಾಂಕ್‌ನಲ್ಲಿರುವ ಎರಡು ಖಾತೆಗಳಿಗೆ ಮತ್ತು ಆ ಬಳಿಕ ಉತ್ತರ ಕನ್ನಡದ ಟಿಬೇಟಿಯನ್ ಕಾಲೊನಿಯ ಲಾಮಾ ಕ್ಯಾಂಪ್ ನಲ್ಲಿ ವಾಸವಿರುವ ಲೋಬಸಂಗ್ ಸಂಗ್ಯೆಯ ಅವರ ಕೆನರಾ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಿರುವುದು ಕಂಡುಬಂದಿತ್ತು.
ತನಿಖೆ ಮುಂದುವರಿಸಿದ ಪೊಲೀಸರಿಗೆ ಆರೋಪಿ ದಕಫಾ ಪುಂಡೆ, ಚೀನಾದ ನಿಷೇಧಿತ ಆಯಪ್‌ಗಳಾದ wechat ಮತ್ತು red pack ಮುಂತಾದವುಗಳ ಮೂಲಕ ಹವಾಲ ರೀತಿಯಲ್ಲಿ ಹಣವನ್ನು ವರ್ಗಾವಣೆ ಮಾಡಿರುವುದು ಕಂಡುಬಂದಿತ್ತು.
ಪ್ರಕರಣಕ್ಕೆ ಸಂಬಂಧಿಸಿ ನ. 10ರಂದು ಆರೋಪಿಗಳನ್ನು ಬಂಧಿಸಲಾಗಿದ್ದು, ಮಂಗಳೂರು 7ನೆ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ 10 ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದರು.


