ಮಂಗಳೂರು: ರಾಷ್ಟ್ರಪತಿಯವರಿಂದ ಪದ್ಮಶ್ರೀ ಪುರಸ್ಕೃತಗೊಂಡು ಇಂದು ಬೆಳಗ್ಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅಕ್ಷರ ಸಂತ ಹರೇಕಳ ಹಾಜಬ್ಬನವರನ್ನು ಅಭಿನಂದಿಸಲು ಅವರ ಅಭಿಮಾನಿಗಳಿಂದ ನೂಕುನುಗ್ಗಲು ಉಂಟಾಯಿತು.

ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೆ ಭಾರತ ಸರಕಾರ ನೀಡುವ ನಾಲ್ಕನೇ ಅತೀ ದೊಡ್ಡ ನಾಗರಿಕ ಪ್ರಶಸ್ತಿ ‘ಪದ್ಮಶ್ರೀ’ ಯನ್ನು ಸೋಮವಾರ ಪ್ರದಾನ ಮಾಡಲಾಯಿತು. ತಮ್ಮ ಎಂದಿನ ಸರಳ ಉಡುಗೆಯಲ್ಲಿ ವೇದಿಕೆಯೇರಿದ ಹಾಜಬ್ಬ ಪ್ರಶಸ್ತಿ ಸ್ವೀಕರಿಸಿದ್ದರು.

ಇನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ಅವರನ್ನು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಅವರು ಆತ್ಮೀಯವಾಗಿ ಸ್ವಾಗತಿಸಿ, ಸನ್ಮಾನಿಸಿದ್ದಾರೆ. ಅವರನ್ನು ಇಂದು ಬೆಳಿಗ್ಗೆ ನಗರದ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಸನ್ಮಾನಿಸಲಾಗಿದೆ.


ಬಡಮಕ್ಕಳಿಗಾಗಿ ಸ್ವಂತ ದುಡಿಮೆಯಲ್ಲಿ ಶಾಲೆ ನಿರ್ಮಿಸಿ, ನೂರಾರು ಮಕ್ಕಳ ವಿದ್ಯಾರ್ಜನೆಗೆ ನೆರವಾದ ಕಿತ್ತಳೆ ವ್ಯಾಪಾರಿಯಾಗಿದ್ದ ಹರೇಕಳ ಹಾಜಬ್ಬರನ್ನು ಕೇಂದ್ರ ಸರಕಾರವು 2020ನೆ ಸಾಲಿನ ‘ಪದ್ಮಶ್ರೀ’ ಪ್ರಶಸ್ತಿಗೆ ಆಯ್ಕೆ ಮಾಡಿ 2020ರ ಜನವರಿ 25ರಂದು ಘೋಷಿಸಿತ್ತು. ಅದೇ ವರ್ಷ ಮಾರ್ಚ್ ತಿಂಗಳಲ್ಲಿ ಪ್ರಶಸ್ತಿ ಪ್ರದಾನ ಮಾಡುವ ದಿನಾಂಕವನ್ನೂ ಸರಕಾರ ನಿಗದಿಪಡಿಸಿತ್ತು. ಆದರೆ ಕೋವಿಡ್-19 ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಘೋಷಿಸಿದ್ದರಿಂದ ಕಾರ್ಯಕ್ರಮ ಮುಂದೂಡಲ್ಪಟ್ಟಿತ್ತು.


