ಬೆಂಗಳೂರು : ರಾಜ್ಯದಲ್ಲಿ ಬರಗಾಲ ಸಮೀಪಿಸುತ್ತಿದ್ದು, ಈ ವೇಳೆ, ಕುಡಿಯುವ ನೀರು ಸರಬರಾಜು ಮಾಡಬೇಕಾದ ಗ್ರಾಮೀಣಾಭಿವೃದ್ಧಿ ಸಚಿವರು ಎಲ್ಲಿ ಮಲಗಿದ್ದಾರೋ ಎಂದು ಹೇಳಿಕೆ ನೀಡಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ಸಚಿವ ಈಶ್ವರಪ್ಪ ತೀವ್ರವಾಗಿ ತರಾಟೆ ತೆಗೆದುಕೊಂಡಿದ್ದಾರೆ.
ವಿರೋಧ ಪಕ್ಷದ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಾವು ಕೊರೋನಾ ವಿಚಾರದಲ್ಲಿ ರಾಜಕೀಯ ಮಾಡಲ್ಲ ಅಂತ ಹೇಳಿ ಈಗ ರಾಜಕೀಯ ಮಾಡುತ್ತಿದ್ದಾರೆ. ಬೇಕಿದ್ದರೆ ಸ್ವತಃ ಅವರೇ ಬಂದು ನಾನು ಎಲ್ಲಿ ಮಲಗಿದ್ದೇನೆ ಎಂದು ನೋಡಲಿ ಎಂದು ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ಇಂದು ಡಿಕೆಶಿ ಸುದ್ದಿಗೋಷ್ಠಿ ಕರೆಯುತ್ತಾರೆಂಬ ಕಲ್ಪನೆ ಸಹ ನನಗೆ ಇರಲಿಲ್ಲ. ವಿರೋಧ ಪಕ್ಷದ ನಾಯಕರಾಗಿ ಡಿಕೆಶಿ ನನಗೆ ಕರೆ ಮಾಡಿ ಕೇಳಬಹುದಿತ್ತು. ಆದರೆ, ಅದನ್ನು ಬಿಟ್ಟು ಅವರು ರಾಜಕೀಯ ಮಾಡುತ್ತಿದ್ದಾರೆ. ಡಿಕೆಶಿ ಪ್ರಸ್ತಾಪ ಮಾಡಿರುವ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ. ಜನರ ಸಮಸ್ಯೆಗಳಿಗೆ ಸರ್ಕಾರ ಉತ್ತಮವಾಗಿ ಸ್ಪಂದಿಸುತ್ತಿದೆ. ನಾನೇನು ಸುಮ್ಮನೆ ಕೂತಿಲ್ಲ, ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇನೆ. ನಮ್ಮ ಕೆಲಸ ಮತ್ತು ಕರ್ತವ್ಯವನ್ನು ನಾವು ಮಾಡ್ತಿದ್ದೇವೆ. ನಾನು ಎಲ್ಲಾದ್ರೂ ಮಲಗಿ ಬಂದಿದ್ರೆ ಇಲ್ಯಾಕೆ ಬಂದು ಸುದ್ದಿಗೋಷ್ಟಿ ಮಾಡ್ತಿದ್ದೆ? ಬೇಕಿದ್ದರೆ ನಾನು ಎಲ್ಲಿ ಮಲಗಿದ್ದೇನೆ ಎಂದು ಸ್ವತಃ ಡಿಕೆಶಿ ಅವರೇ ಬಂದು ನೋಡಲಿ’ ಎಂದು ಕಾಲೆಳೆದರು.