ನವದೆಹಲಿ: ದೇಶಾದ್ಯಂತ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಏಪ್ರಿಲ್ 5 ರಂದು ರಾತ್ರಿ 9 ಗಂಟೆಗೆ 9 ನಿಮಿಷ ಮನೆಯ ಎಲ್ಲಾ ಲೈಟ್ ಗಳನ್ನು ಆಫ್ ಮಾಡಿ ದೀಪ, ಮೊಬೈಲ್ ಲೈಟ್, ಮೇಣದಬತ್ತಿ ಬೆಳಗುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಏಪ್ರಿಲ್ 5 ರಂದು ರಾತ್ರಿ 9 ಗಂಟೆಗೆ 9 ನಿಮಿಷ ದೇಶಾದ್ಯಂತ ಎಲ್ಲರೂ ಲೈಟ್ ಆಫ್ ಮಾಡಿದರೆ ಅಂದಾಜು 25 ರಿಂದ 35 ಸಾವಿರ ಮೆಗಾವ್ಯಾಟ್ ವಿದ್ಯುತ್ ಬಳಕೆ ಕಡಿಮೆಯಾಗಲಿದೆ. ದೇಶದಲ್ಲಿ ಗರಿಷ್ಠ ವಿದ್ಯುತ್ ಬೇಡಿಕೆ ಅಂದಾಜು 1,25,817 ಮೆಗಾವ್ಯಾಟ್ ಇದ್ದು 9 ನಿಮಿಷದ ಲೈಟ್ ಆಫ್ ಆದರೆ 90 ಸಾವಿರದಿಂದ 1 ಲಕ್ಷ ಮೆಗಾವ್ಯಾಟ್ ಇಳಿಯಬಹುದು ಎಂದು ಅಂದಾಜಿಸಲಾಗಿದೆ.
ಲಾಕ್ಡೌನ್ ಜಾರಿಯಲ್ಲಿರುವುದರಿಂದ ಪೀಕ್ ಅವರ್ ನಲ್ಲಿ ವಿದ್ಯುತ್ ಬೇಡಿಕೆ 43 ಸಾವಿರ ಮೆಗಾವ್ಯಾಟ್ ನಷ್ಟು ಕಡಿಮೆಯಾಗಿದೆ. ಭಾನುವಾರ ರಾತ್ರಿ ಎಲ್ಲರೂ ಒಮ್ಮೆಲೇ ವಿದ್ಯುತ್ ಲೈಟ್ ಆಫ್ ಮಾಡಿದರೆ ಪವರ್ ಗ್ರಿಡ್ ಕಾರ್ಯಾಚರಣೆ ಸ್ಥಗಿತಗೊಳ್ಳುವ ಸಾಧ್ಯತೆಯಿದೆ ಎಂಬ ವದಂತಿ ಹರಡಿದೆ. ಆದರೆ ಅಂತಹ ಯಾವುದೇ ಸಾಧ್ಯತೆಯಿಲ್ಲ. ಮನೆಯಲ್ಲಿ ಲೈಟ್ ಗಳನ್ನು ಮಾತ್ರ ಸ್ವಿಚ್ ಆಫ್ ಮಾಡಿ. ಉಳಿದಂತೆ ಯಾವುದೇ ವಿದ್ಯುತ್ ಉಪಕರಣಗಳ ಆಫ್ ಮಾಡದಂತೆ ಸಲಹೆ ನೀಡಲಾಗಿದೆ.