Monday, May 6, 2024
Homeತಾಜಾ ಸುದ್ದಿಇಂದು ದ್ರೋಣಾಚಾರ್ಯ ಪ್ರಶಸ್ತಿ ಸ್ವೀಕಾರದ ಸಂಭ್ರಮದಲ್ಲಿದ್ದ ಪುತ್ತೂರು ಮೂಲದ ಪುರುಷೋತ್ತಮ ರೈ ನಿಧನ!

ಇಂದು ದ್ರೋಣಾಚಾರ್ಯ ಪ್ರಶಸ್ತಿ ಸ್ವೀಕಾರದ ಸಂಭ್ರಮದಲ್ಲಿದ್ದ ಪುತ್ತೂರು ಮೂಲದ ಪುರುಷೋತ್ತಮ ರೈ ನಿಧನ!

spot_img
- Advertisement -
- Advertisement -

ಬೆಂಗಳೂರು: ದೇಶ ಕಂಡ ಖ್ಯಾತ ಅಥ್ಲೆಟಿಕ್ಸ್‌ ತರಬೇತುದಾರ ಮತ್ತು ಪುತ್ತೂರು ಮೂಲದ ಪುರುಷೋತ್ತಮ ರೈ (79) ನಿನ್ನೆ ತಡರಾತ್ರಿ ತಮ್ಮ ಬೆಂಗಳೂರಿನ ನಿವಾಸದಲ್ಲಿ ಹೃದಯಾಘಾತ ಹೊಂದಿದ ಪರಿಣಾಮ ನಿಧನ ಹೊಂದಿದ್ದಾರೆ.

ಇಂದು ಆನ್‌ಲೈನ್‌ ಮೂಲಕ ದ್ರೋಣಾಚಾರ್ಯ ಪ್ರಶಸ್ತಿಯನ್ನು ಸ್ವೀಕರಿಸುವ ಸಂಭ್ರಮದಲ್ಲಿದ್ದ ಅವರು, ಹಿಂದಿನ ದಿನವಾದ ಶುಕ್ರವಾರ ಸಾವನ್ನಪ್ಪಿರುವುದು ಕುಟುಂಬ ಸದಸ್ಯರನ್ನು ಅಪಾರ ಶಿಷ್ಯವೃಂದವನ್ನು ದುಃಖದ ಮಡುವಿನಲ್ಲಿ ಮುಳುಗಿಸಿದೆ.

ಕಳೆದ 35 ವರ್ಷಗಳ ಕಾಲ ರಾಜ್ಯದ ಅಥ್ಲೀಟ್‌ಗಳಿಗೆ ತರಬೇತಿ ನೀಡಿದ್ದ ಪುರುಷೋತ್ತಮ್ ರೈ, ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಶನಿವಾರ ಬೆಂಗಳೂರಿನ ಸಾಯ್ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ವರ್ಚುವಲ್ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಸಮಾರಂಭದಲ್ಲಿ ಅವರು ಜೀವಮಾನ ಸಾಧನೆಗಾಗಿ ದ್ರೋಣಾಚಾರ್ಯ ಪ್ರಶಸ್ತಿ ಸ್ವೀಕರಿಸಬೇಕಿತ್ತು. ದಿನಪೂರ್ತಿ ಎಂದಿನಂತೆ ಲವವಿಕೆಯಿಂದಲೇ ಇದ್ದ ಪುರುಷೋತ್ತಮ್ ರೈ ಅವರಿಗೆ ಸಂಜೆ ವೇಳೆಗೆ ದಿಢೀರನೇ ಎದೆ ನೋವು ಕಾಣಿಸಿಕೊಂಡಿತು. ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚೇತರಿಸಿಕೊಳ್ಳದೆ ಕೊನೆಯುಸಿರು ಎಳೆದಿದ್ದಾರೆ.

ಭಾರತದ ಅತ್ಯುತ್ತಮ ಅಥ್ಲೀಟ್‌ಗಳಾಗಿ ಖ್ಯಾತರಾದ ಮುರಳಿಕುಟ್ಟನ್‌, ಅಶ್ವಿ‌ನಿ ನಾಚಪ್ಪ, ಎಸ್‌.ಡಿ.ಈಶನ್‌, ರೋಸಾ ಕುಟ್ಟಿ, ಜಿ.ಜಿ.ಪ್ರಮೀಳಾ, ಎಂ.ಕೆ.ಆಶಾ, ಇ.ಬಿ.ಶೈಲಾ, ಜೈಸಿ ಥಾಮಸ್‌ ಸೇರಿದಂತೆ ಅನೇಕ ಅಥ್ಲೀಟ್‌ಗಳು ಪುರುಷೋತ್ತಮ್ ರೈ ಅವರ ತರಬೇತಿಯಲ್ಲಿ ಪಳಗಿದ್ದರು.

1987ರ ವಿಶ್ವ ಅಥ್ಲಿಟಿಕ್ ಚಾಂಪಿಯನ್‌ಷಿಪ್, 1988ರ ಏಷ್ಯನ್ ಟ್ರ್ಯಾಕ್ ಮತ್ತು ಫೀಲ್ಡ್ ಚಾಂಪಿಯನ್‌ಷಿಪ್ ಹಾಗೂ 1999ರ ಸೌತ್ ಏಷ್ಯನ್ ಗೇಮ್ಸ್‌ನ ತಂಡದ ಕೋಚ್‌ ಆಗಿ ಕರ್ತವ್ಯ ನಿರ್ವಹಿಸಿದ್ದರು.

ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಜನಿಸಿದ ಪುರುಷೋತ್ತಮ ರೈ ಸ್ಥಳೀಯ ಬೋರ್ಡ್‌ ಶಾಲೆಯಲ್ಲಿ 10ನೇ ತರಗತಿ ವರೆಗೆ ಓದಿದ್ದರು. ಸೇಂಟ್ ಫಿಲೋಮಿನಾ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಪೂರೈಸಿದ್ದರು. ಬ್ಯಾಂಕ್ ಉದ್ಯೋಗಿಯಾಗಿ, ಸೈನಿಕನಾಗಿ, ಕ್ರೀಡಾಪಟುವಾಗಿ, ಕೊನೆಗೆ ಕೋಚ್ ಆಗಿ ಗಮನ ಸೆಳೆದಿದ್ದರು. ಒಟ್ಟು 33 ಖ್ಯಾತ ಅಥ್ಲೀಟ್‌ಗಳು ಅವರ ಬಳಿ ತರಬೇತಿ ಪಡೆದಿದ್ದಾರೆ. ಡೆಕಾಥ್ಲೀಟ್‌ ಆಗಿದ್ದ ಅವರು ಕೇರಳದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಮತ್ತು ತಮಿಳುನಾಡಿನಲ್ಲಿ ಆಯೋಜಿಸಿದ್ದ ಮುಕ್ತ ಕೂಟದಲ್ಲಿ ಬೆಳ್ಳಿ ಪದಕ ಗಳಿಸಿದ್ದರು. ಕರ್ನಾಟಕ ರಾಜ್ಯ ಹ್ಯಾಂಡ್‌ಬಾಲ್ ತಂಡವನ್ನೂ ಮುನ್ನಡೆಸಿದ ಬಹುಮುಖ ಪ್ರತಿಭೆ.

ಮೃತರು ಪತ್ನಿ ಹಾಗೂ ಮಗ, ಸೊಸೆಯನ್ನು ಅಗಲಿದ್ದಾರೆ.

- Advertisement -
spot_img

Latest News

error: Content is protected !!