Friday, September 13, 2024
Homeತಾಜಾ ಸುದ್ದಿಕೊರೊನಾ : ಸರ್ಕಾರದ ಅವ್ಯವಹಾರ ನೋಡಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ - ಡಿ.ಕೆ.ಶಿ

ಕೊರೊನಾ : ಸರ್ಕಾರದ ಅವ್ಯವಹಾರ ನೋಡಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ – ಡಿ.ಕೆ.ಶಿ

spot_img
- Advertisement -
- Advertisement -

ಬೆಂಗಳೂರು : ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ರೈತರು, ಶ್ರಮಿಕ ವರ್ಗದವರು ಎದುರಿಸುತ್ತಿರುವ ಸಂಕಷ್ಟಗಳಿಗೆ ಪರಿಹಾರೋಪಾಯ ಕಂಡು ಹಿಡಿಯಲು ಇಂದು ವಿಧಾನಸೌಧದಲ್ಲಿ ಗುರುವಾರ ಕರೆದಿದ್ದ ಪ್ರತಿಪಕ್ಷಗಳು, ರೈತರು ಮತ್ತಿತರ ಸಂಘಟನೆಗಳ ಮುಖಂಡರ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿದರು.
ರಾಜ್ಯ ಸರಕಾರಕ್ಕೆ ನೀಡಿದ್ದ ‘ಸಹಕಾರ ಕಾಲಾವಕಾಶ’ ಮುಗಿದಿದೆ. ಬಡವರಿಗೆ ಅಕ್ಕಿಯಿಂದ ಹಿಡಿದು, ಹಾಲು, ತರಕಾರಿ, ದಿನಸಿ ಹಂಚಿಕೆವರೆಗೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇನ್ನೇನಿದ್ದರೂ ನಾವು ಸರ್ಕಾರದ ವೈಫಲ್ಯಗಳ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಬೇಕಿದೆ’ ಎಂದು ಗುಡುಗಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಕಷ್ಟದ ಸಮಯದಲ್ಲಿ ಸರ್ಕಾರಕ್ಕೆ ನಾವು ಸಂಪೂರ್ಣ ಸಹಕಾರ ನೀಡಿದ್ದೇವೆ. ಈ ಸಮಯದಲ್ಲಿ ರಾಜಕಾರಣ ಮಾಡಬಾರದು ಹಾಗೂ ಮಾನವೀಯತೆ ದೃಷ್ಟಿಯಿಂದ ನಾವು ಸರ್ಕಾರದ ಜತೆ ಕೈ ಜೋಡಿಸಿದ್ದೇವೆ. ಕಳೆದ 40 ದಿನಗಳಲ್ಲಿ ಸರ್ಕಾರ ಏನು ಮಾಡಿದೆ ಎಂಬುದನ್ನು ನೀವೆಲ್ಲ ನೋಡಿದ್ದೀರಿ. ಸಚಿವರುಗಳ ನಡುವೆ ಸಮನ್ವಯತೆ, ಅಧಿಕಾರಿಗಳಲ್ಲಿ ಹೊಂದಾಣಿಕೆ ಕೊರತೆ ಎದ್ದು ಕಾಣುತ್ತಿದೆ. ಪ್ರತಿ ವಿಚಾರದಲ್ಲೂ ದಂಧೆ ನಡೆಯುತ್ತಿದೆ. ಇದನ್ನು ನೋಡಿಕೊಂಡು ಕೂರಲು ಇನ್ನು ಸಾಧ್ಯವಿಲ್ಲ ಎಂದಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನರಿಗೆ ಏನು ಆಶ್ವಾಸನೆ ಕೊಟ್ಟಿದೆಯೋ ಅದರಲ್ಲಿ ಒಂದೇ ಒಂದೂ ಕಾರ್ಯ ರೂಪಕ್ಕೆ ಬಂದಿಲ್ಲ. ಆಹಾರ ವಿತರಣೆಯಲ್ಲಿ ಶೇ.20 ರಷ್ಟು ಕೆಲಸ ಆಗಿರೋದು ಬಿಟ್ಟರೆ, ಆರೋಗ್ಯ ವಿಷಯದಿಂದ ಹಿಡಿದು ಕಾರ್ಮಿಕರ ಸಮಸ್ಯೆವರೆಗೂ ಎಲ್ಲೂ ಕೆಲಸ ಆಗಿಲ್ಲ. ಆದಾಯ ಇಲಾಖೆ ಅಧಿಕಾರಿಗಳ ಜತೆ ಮಾತನಾಡಿದಾಗ ಪಿಂಚಣಿ ಹಣ ಕೂಡ ಸರಿಯಾಗಿ ಫಲಾನುಭವಿಗಳಿಗೆ ತಲುಪಿಲ್ಲ ಎಂಬುದು ಗೊತ್ತಾಗಿದೆ. ಇದನ್ನು ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ ಎಂದರು.

ಕೊರೊನಾ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಇರಲಿ, ಜೆಡಿಎಸ್ ಇರಲಿ ಇತರೆ ಸಂಘಟನೆಗಳಿರಲಿ ಎಲ್ಲವೂ ಸ್ವಹಿತಾಸಕ್ತಿ ಮರೆತು ರಸ್ತೆಗಿಳಿದು ಜನರಿಗೆ ಸಹಾಯ ಮಾಡಿವೆ. ಶಕ್ತಿ ಮೀರಿ ಜನಪರವಾಗಿ ಶ್ರಮಿಸಿವೆ. ಈ ವಿಚಾರದಲ್ಲಿ ನಾವು ರಾಜಕಾರಣವನ್ನು ದೂರವಿಟ್ಟೆವು. ಆದರೆ ಈಗ ಸಮಯ ಮೀರತ್ತಿದೆ. ಇನ್ನು ನಾವು ಸುಮ್ಮನೇ ಕೂತರೆ ಜನರಿಗೆ, ನಮ್ಮ ಜವಾಬ್ದಾರಿಗೆ ಮೋಸ ಮಾಡಿದಂತಾಗುತ್ತದೆ. ಹಾಲು ಕೊಡ್ರಿ ಅಂದ್ರೆ ಅದರಲ್ಲೂ ವ್ಯಾಪಾರ. ಅಕ್ಕಿ ಕೊಡುವುದರಲ್ಲೂ ಅವ್ಯವಹಾರ. ಈವರೆಗೂ ಸರ್ಕಾರ ಒಂದೇ ಒಂದು ಕಡೆ ತರಕಾರಿಗಳನ್ನು ಖರೀದಿ ಮಾಡಿರುವ ದಾಖಲೆ ನಿಮ್ಮ ಬಳಿ ಇದ್ದರೆ ಕೊಡಿ. ಅವರು ಖರೀದಿಸಿಲ್ಲ ಅಂದ್ರೆ ಹೊರ ರಾಜ್ಯಗಳಿಗೆ ಕಳುಹಿಸಿದ್ದಾರಾ? ಅದಕ್ಕೆ ಅವಕಾಶ ಸಿಕ್ಕಿದ್ಯಾ? ಇದ್ಯಾವುದರ ಬಗ್ಗೆಯೂ ಮಾಹಿತಿ ಇಲ್ಲ ಎಂದು ಕಿಡಿಕಾರಿದರು.

ಇನ್ನು ವಾಹನ ಸಾಲ ಪಡೆದಿರುವವರಿಗೆ ಕಂತಿನ ವಿನಾಯಿತಿ, ಬಡ್ಡಿ ಮನ್ನಾ ಅಥವಾ ವಿಮೆ ಕಂತು ತಡವಾಗಿ ಕಟ್ಟಲು ಅವಕಾಶ ಕಲ್ಪಿಸಲಾಗಿಲ್ಲ. ಹೀಗೆ ಒಂದಲ್ಲ ಎರಡಲ್ಲ, ಪಟ್ಟಿ ಮಾಡುತ್ತಾ ಹೋದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಲ್ಲ ವಿಚಾರ್ಲ್ಲೂ ವಿಫಲವಾಗಿರುವುದು ಎದ್ದು ಕಾಣುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರಗಳು ಇಷ್ಟು ಬೇಜವಾಬ್ದಾರಿಯಾಗಿ ನಡೆದುಕೊಂಡಿರುವುದನ್ನು ನಾನು ಈವರೆಗೂ ನೋಡಿರಲಿಲ್ಲ. ವಿರೋಧ ಪಕ್ಷದ ಪ್ರತಿನಿಧಿಗಳಾಗಿ ನಮ್ಮ ನಾಯಕರು ವಾಹನ ಚಾಲಕರಿಂದ, ಅಸಂಘಟಿತ ಕಾರ್ಮಿಕರವರೆಗೂ ಸಮಾಜದ ಎಲ್ಲ ವರ್ಗದವರನ್ನು ಕರೆದು ಮಾತನಾಡಿ ಅವರ ಕಷ್ಟಕ್ಕೆ ಧ್ವನಿಯಾಗಿದ್ದೇವೆ. ಇಲ್ಲಿ ಪಕ್ಷದ ಭಿನ್ನತೆ ಮರೆಯೋಣ. ಒಟ್ಟಾಗಿ ಸೇರಿ ಅಧಿಕಾರದಲ್ಲಿರಬಹುದು, ಇಲ್ಲದೇ ಇರಬಹುದು. ಜನಪ್ರತಿನಿಧಿಗಳಾಗಿರುವ ನಿಮ್ಮನ್ನು ಒಟ್ಟಾಗಿ ತೆಗೆದುಕೊಂಡು ಹೋಗಲು ನಾವು ಸಿದ್ಧವಿದ್ದೇವೆ. ನಿಮ್ಮ ಸಹಕಾರವಿರಲಿ. ನೀವು ಎಲ್ಲಿ, ಯಾವಾಗ ಚರ್ಚೆಗೆ ನಾವು ಬರುತ್ತೇವೆ. ಈ ವಿಚಾರದಲ್ಲಿ ಅಂತಸ್ತು ಇಲ್ಲ. ರೈತರು, ಕಾರ್ಮಿಕರು ಸೇರಿ ಎಲ್ಲ ವರ್ಗದವರನ್ನು ಪ್ರತಿನಿಧಿಸುವ ಪಕ್ಷದ ಅಧ್ಯಕ್ಷನಾಗಿ ಹೇಳುತ್ತೇನೆ. ನೀವು ನಮಗೆ ಸಹಕಾರ ನೀಡಿದ್ದೀರಿ. ಅದೇರೀತಿ ನಾವು ಕೂಡ ನಿಮಗೆ ಸಹಕಾರ ನೀಡುತ್ತೇವೆ ಎಂದರು.

ತೋಟಗಳಲ್ಲಿ ಫಲಗಳು ಕೊಳೆಯುತ್ತಿವೆ. ಮುಸಲ್ಮಾನ ವ್ಯಾಪಾರಿಗಳಿಗೆ ತೋಟದೊಳಗೆ ಕಾಲಿಡಲು ಅವಕಾಶ ನೀಡುತ್ತಿಲ್ಲ. ಬೇರೆ ರಾಜ್ಯದವರು ಬರುವಂತಿಲ್ಲ. ಕೋಳಿಗಳನ್ನು ಜೀವಂತವಾಗಿ ಮಣ್ಣಲ್ಲಿ ಮುಚ್ಚಿದ್ದಾರೆ. ಇದೆಲ್ಲವನ್ನೂ ನೋಡಿದರೆ ಇಂದು ಎಲ್ಲ ವರ್ಗದ ಜನರ ಬದುಕು ಶೋಚನೀಯವಾಗಿದೆ. ಈ ವರ್ಗದ ಜನರನ್ನು ಬದುಕಿಯೂ ಸಾಯುವಂತೆ ಮಾಡಲಾಗಿದೆ. ಅಂತಹವರಿಗೆ ಮತ್ತೆ ಜೀವ ತುಂಬುವ ಬಗ್ಗೆ ಇಂದು ಚರ್ಚೆ ಮಾಡಿ ನಿಮ್ಮ ಅಭಿಪ್ರಾಯ ಸಂಗ್ರಹಿಸಲು ವಿರೋಧ ಪಕ್ಷದ ನಾಯಕರು ಸಭೆ ಕರೆದಿದ್ದಾರೆ. ನಾವು ಅವರ ಜತೆ ಇದ್ದೇವೆ. ನೀವು ಅವರ ಜತೆ ಇರಿ. ನಾವೆಲ್ಲ ಒಟ್ಟಾಗಿ ಒಂದು ಯೋಜನೆ ರೂಪಿಸಿ ಈ ರಾಜ್ಯದ ಜನತೆಯ ಜೀವ ಹಾಗೂ ಜೀವನವನ್ನು ಉಳಿಸಲು ಶ್ರಮಿಸೋಣ’ ಎಂದು ತಿಳಿಸಿದರು.

- Advertisement -
spot_img

Latest News

error: Content is protected !!