Monday, July 1, 2024
Homeಪ್ರಮುಖ-ಸುದ್ದಿಕಾಶ್ಮೀರದಂತಾದ ಬೆಂಗಳೂರಿನ ಡಿ.ಜೆ ಹಳ್ಳಿ, ಪೊಲೀಸರ ಫೈರಿಂಗ್ ಗೆ 3 ಜನ ಬಲಿ, 110...

ಕಾಶ್ಮೀರದಂತಾದ ಬೆಂಗಳೂರಿನ ಡಿ.ಜೆ ಹಳ್ಳಿ, ಪೊಲೀಸರ ಫೈರಿಂಗ್ ಗೆ 3 ಜನ ಬಲಿ, 110 ಜನರ ಬಂಧನ

spot_img
- Advertisement -
- Advertisement -

ಬೆಂಗಳೂರು : ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಸಂಬಂಧಿಕರೊಬ್ಬರು ಮುಸ್ಲಿಂ ವಿರೋಧಿ ಪೋಸ್ಟ್​ ಮಾಡಿದ್ದರು ಎಂಬ ಕಾರಣಕ್ಕೆ ನಿನ್ನೆ ರಾತ್ರಿ ಕೆ.ಜಿ. ಹಳ್ಳಿ ಹಾಗೂ ಡಿ.ಜೆ. ಹಳ್ಳಿ ಪೊಲೀಸ್ ಠಾಣೆ ಮತ್ತು ಕಾವಲ್​ಭೈರಸಂದ್ರದಲ್ಲಿರುವ ಅಖಂಡ ಶ್ರೀನಿವಾಸ್ ಮೂರ್ತಿ​ ಮನೆಗೆ ಬೆಂಕಿ ಹಚ್ಚಿ ಸಾವಿರಾರು ಜನರು ಆಕ್ರೋಶ ಹೊರಹಾಕಿದ್ದರು. ರಾತ್ರಿ ಅಖಂಡ ಶ್ರೀನಿವಾಸ್ ಮನೆ ಎದುರಿನ ರಸ್ತೆ, ಮನೆಗೆ ಬೆಂಕಿ ಹಚ್ಚಿದ ಜನರ ಗುಂಪಿನ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ. ಈ ವೇಳೆ ಮೂವರು ಸಾವನ್ನಪ್ಪಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಈ ಗಲಭೆಯಲ್ಲಿ ಪೊಲೀಸರು ಕೂಡ ತೀವ್ರವಾಗಿ ಗಾಯಗೊಂಡಿದ್ದಾರೆ.

ನಿನ್ನೆ ರಾತ್ರಿ ಸುಮಾರು 9 ಗಂಟೆಯಿಂದ ಬೆಳಗಿನ ಜಾವದವರೆಗೂ ನಡೆದ ಗಲಭೆಗೆ ಸಂಬಂಧಿಸಿದಂತೆ 110 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನಷ್ಟು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. 10ಕ್ಕೂ ಹೆಚ್ಚು ಜನರು ಗುಂಡೇಟಿನಿಂದ ಗಾಯಗೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 10ಕ್ಕೂ ಹೆಚ್ಚು ಕೇಸ್​ಗಳನ್ನು ದಾಖಲಿಸಿಕೊಳ್ಳಲಾಗಿದೆ.

ನಿನ್ನೆ ರಾತ್ರಿ ಸಾವಿರಾರು ಸಂಖ್ಯೆಯಲ್ಲಿ ಕೆ.ಜಿ. ಹಳ್ಳಿ ಪೊಲೀಸ್ ಠಾಣೆಯ ಎದುರು ಜಮಾಯಿಸಿದ್ದ ಮುಸ್ಲಿಮರು ಗಲಾಟೆ ನಡೆಸಿದರು. ಹೀಗಾಗಿ, ಪೂರ್ವ ವಿಭಾಗದ ಎಲ್ಲ ಪೊಲೀಸ್ ಇನ್​ಸ್ಪೆಕ್ಟರ್​​ಗಳನ್ನು ಹಾಗೂ ಸಿಬ್ಬಂದಿಯನ್ನು ಕೆ.ಜಿ. ಹಳ್ಳಿ ಠಾಣೆಗೆ ಬರಲು ಸೂಚನೆ ನೀಡಲಾಗಿತ್ತು. ಅಖಂಡ ಶ್ರೀನಿವಾಸ್ ಮೂರ್ತಿ ಮನೆ ಮುಂಭಾಗದಲ್ಲೂ ಪೊಲೀಸ್ ಬಂದೋಬಸ್ತ್​ ನೀಡಲಾಗಿತ್ತು. ಮೊದಲು ಪೊಲೀಸ್ ಠಾಣೆ ಮತ್ತು ಶಾಸಕ ಶ್ರೀನಿವಾಸ್ ಮೂರ್ತಿ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ ಜನರ ಗುಂಪು ನಂತರ ಬೆಂಕಿ ಹಚ್ಚಿ, ಗಲಭೆಯೆಬ್ಬಿಸಿತು.

ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ, ಮುಸ್ಲಿಮರು ನನ್ನ ಸಹೋದರರಿದ್ದಂತೆ. ದಯವಿಟ್ಟು ಶಾಂತಿಯಿಂದ ವರ್ತಿಸಿ. ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ಕೊಡಿಸುವ ವ್ಯವಸ್ಥೆ ಮಾಡಲಾಗುವುದು. ನಾವು ನಿಮ್ಮ ಜೊತೆ ಇರುತ್ತೇವೆ ಎಂದು ಭರವಸೆ ನೀಡಿದ್ದರು. ಆದರೂ ಗಲಾಟೆ ಮುಂದುವರೆಸಿದ ಜನರ ಗುಂಪು ಈ ಕೂಡಲೇ ಅಖಂಡ ಶ್ರೀನಿವಾಸ್ ಮೂರ್ತಿ ಸಂಬಂಧಿಯ ವಿರುದ್ಧ ಎಫ್​ಐಆರ್ ದಾಖಲಿಸಿ, ಬಂಧಿಸುವಂತೆ ಪಟ್ಟು ಹಿಡಿದಿತ್ತು.

ಪೊಲೀಸರ ಭರವಸೆಯಿಂದ ಸಮಾಧಾನಗೊಳ್ಳದ ಪ್ರತಿಭಟನಾಕಾರರು ಕೆ.ಜಿ. ಹಳ್ಳಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದರು. ನಂತರ ಅಖಂಡ ಶ್ರೀನಿವಾಸ್ ಮೂರ್ತಿ ಮನೆಯ ಎದುರಿನ ರಸ್ತೆ ಹಾಗೂ ಮನೆಗೂ ಬೆಂಕಿ ಹಚ್ಚಿದರು. ಅವರ ಏರಿಯಾದ ಎಲ್ಲ ರಸ್ತೆಗಳಲ್ಲೂ ಬೆಂಕಿ ಹಚ್ಚಿದ್ದರು. ಇದರಿಂದ ಡಿ.ಜೆ. ಹಳ್ಳಿ ಸುತ್ತಮುತ್ತ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣ ಬೆಂಗಳೂರಿನ ಎಲ್ಲ ಡಿಸಿಪಿ, ಎಸಿಪಿಗಳು ಕೆ.ಜಿ. ಹಳ್ಳಿ ಹಾಗೂ ಡಿ.ಜೆ. ಹಳ್ಳಿಗೆ ದೌಡಾಯಿಸಿದರು. ಅಖಂಡ ಶ್ರೀನಿವಾಸ್ ಮೂರ್ತಿ​ ಅವರ ಮನೆಗೆ ತೆರಳಿದ ಪೊಲೀಸ್ ಆಯುಕ್ತ ಕಮಲ್ ಪಂತ್ ಮನೆ ಪರಿಶೀಲನೆ ನಡೆಸಿದರು.

ಉದ್ರಿಕ್ತಗೊಂಡಿದ್ದ ಜನರ ಗುಂಪು ಡಿ.ಜೆ. ಹಳ್ಳಿ ಪೊಲೀಸ್ ಠಾಣೆಯ ಬೇಸ್​ಮೆಂಟ್​ನಲ್ಲಿದ್ದ ವಾಹನಗಳು, ವಸ್ತುಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿತು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿಗೆ 1,500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಯಿತು. ಆದರೂ ಪರಿಸ್ಥಿತಿ ಹತೋಟಿಗೆ ಬರಲಿಲ್ಲ. ಬಳಿಕ ಆರೋಪಿ ನವೀನ್ ಎಂಬಾತನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದರು.

- Advertisement -
spot_img

Latest News

error: Content is protected !!