ಬೆಳ್ತಂಗಡಿ: ಧರ್ಮಸ್ಥಳದಲ್ಲಿ ನಡೆದ ದಿನೇಶ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೃತ ದಿನೇಶ್ ತಾಯಿ ಹಾಗೂ ಪತ್ನಿ ಕವಿತಾ ಸುದ್ದಿಗೋಷ್ಠಿ ನಡೆಸಿದರು.
ಈ ವೇಳೆ ಮಾತನಾಡಿದ ದಿನೇಶ್ ಪತ್ನಿ ಕವಿತಾ, ನಾನು ನನ್ನ ಗಂಡನನ್ನು , ಅಜ್ಜಿಯನ್ನು ಮನೆಯಿಂದ ಹೊರಗೆ ಹಾಕಿದ್ದು , ಅವರಿಗೆ ಭಜರಂಗದಳದ ಭಾಸ್ಕರ ಧರ್ಮಸ್ಥಳ ಅವರು ಆಶ್ರಯ ನೀಡಿದ್ದಾರೆ. ಆಸ್ಪತ್ರೆಯಲ್ಲಿ ನನ್ನ ಗಂಡ ಮರದಿಂದ ಬಿದ್ದು ಗಾಯಗೊಂಡಿರುವ ಬಗ್ಗೆ ನಾನು ಹೇಳಿಕೆ ನೀಡಿದ್ದೇನೆ ಎಂಬುದರ ಬಗ್ಗೆ ಸಾಕ್ಷಿ ಸಮೇತ ಭಾಸ್ಕರ ಧರ್ಮಸ್ಥಳ ಅವರು ಆಣೆ ಪ್ರಮಾಣಕ್ಕೆ ಬರಲಿ ಎಂದು ಮೃತ ದಿನೇಶ್ ಪತ್ನಿ ಕವಿತಾ ದಿನೇಶ್ ಸವಾಲು ಹಾಕಿದರು.
ಬೆಳ್ತಂಗಡಿಯ ಜಮಿಯಾತುಲ್ ಫಲಾಹ್ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇಡೀ ಘಟನೆಯನ್ನು ದಾರಿ ತಪ್ಪಿಸಿ , ಅನುಕಂಪ ಪಡೆಯಲು ನಮ್ಮ ಕುಟುಂಬದ ಮೇಲೆ ಅಪಪ್ರಚಾರ ನಡೆಸಿ ನಮ್ಮನ್ನು ಮತ್ತಷ್ಟು ಕುಗ್ಗಿಸಲಾಗುತ್ತಿದೆ. ನನ್ನ ಗಂಡನ ಮೇಲೆ ಫೆಬ್ರವರಿ 23 ರಂದು ಭಾಸ್ಕರ ಧರ್ಮಸ್ಥಳ ಅವರ ಸಹೋದರ ಕೃಷ್ಣ ಅವರು ಸಾರ್ವಜನಿಕ ಸ್ಥಳದಲ್ಲಿ ಗಂಭೀರ ಹಲ್ಲೆ ನಡೆಸಿದ್ದಾರೆ. ಫೆಬ್ರವರಿ 24 ರಂದು ಗಂಭೀರ ಗಾಯಗೊಂಡ ನನ್ನ ಪತಿಯನ್ನು ಹಲವಾರು ಕಡೆ ತೋರಿಸಿ ಕೊನೆಗೆ, ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಷ್ಟು ಹೊತ್ತು ಅಲ್ಲೇ ಇದ್ದ ಕೃಷ್ಣ ಅವರು ಫೆಬ್ರವರಿ 25 ರಂದು ಬೆಳಗ್ಗಿನ ಜಾವ 2.30 ರ ಸುಮಾರಿಗೆ ನನ್ನ ಪತಿ ನಿಧನರಾದ ಸುದ್ದಿ ತಿಳಿದು ಆಸ್ಪತ್ರೆಯಿಂದ ಪರಾರಿಯಾಗಿದ್ದಾರೆ. ತಪ್ಪು ಮಾಡದಿದ್ದರೆ ಆ ನಡು ರಾತ್ರಿ ಪೋನ್ ಸ್ವೀಚ್ ಆಫ್ ಮಾಡಿ ತಪ್ಪಿಸಿಕೊಳ್ಳುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದ್ದಾರೆ.
ಇನ್ನು ಕೃಷ್ಣ ಅವರ ಪತ್ನಿ ನನಗೆ ಕರೆ ಮಾಡಿ ನನ್ನ ಗಂಡ ಕೃಷ್ಣ ಅವರು ಹಲ್ಲೆ ಮಾಡಿದ್ದನ್ನು ಎಲ್ಲಿಯೂ ಹೇಳಬೇಡ , ದಿನೇಶ್ ವಿಪರೀತ ಕುಡಿಯುವ ಚಟದಿಂದ, ಆತನ ಲಿವರ್ ನಲ್ಲಿ ಸಮಸ್ಯೆಯಾಗಿದೆ ಎಂಬುದನ್ನು ತಿಳಿಸಿಲು ವಿನಂತಿಸಿಕೊಂಡಿದ್ದರು. ಅಲ್ಲದೇ ಇದರ ಆಡಿಯೋ ರೆಕಾರ್ಡ್ ನನ್ನ ಬಳಿ ಇದೆ ಎಂದು ಆಡಿಯೋ ರೆಕಾರ್ಡಿಂಗ್ ಬಿಡುಗಡೆ ಮಾಡಿದರು.
ಇನ್ನು ಮೃತ ದಿನೇಶ್ ಅವರ ತಾಯಿ ಮಾತನಾಡಿ ಕೃಷ್ಣ ತಪ್ಪು ಮಾಡಿಲ್ಲ ಎಂದು ಭಾಸ್ಕರ ಅವರ ಹೇಳುತ್ತಿದ್ದಾರೆ. ನಾವು ದೂರು ನೀಡಲು ಹೋದಾಗ ಪೊಲೀಸ್ ಠಾಣೆಯಲ್ಲಿ ಅವರು ಬೆದರಿಕೆ ಹಾಕಿದ್ದಾರೆ ಎಂದು ದಿನೇಶನ ತಾಯಿ ಆರೋಪಿಸಿದ್ದಾರೆ. ತಪ್ಪು ಮಾಡದಿದ್ದರೆ ಮಂಗಳೂರಿನ ಆಸ್ಪತ್ರೆಯಲ್ಲಿ ದಿನೇಶ ಮೃತಪಟ್ಟ ತಕ್ಷಣ ಅಲ್ಲಿಂದ ಪರಾರಿಯಾಗಿರುವುದು ಯಾಕೆ ಎಂದು ಪ್ರಶ್ನಿಸಿದರು. ಅಲ್ಲದೇ ಎಲ್ಲಾ ವಿಚಾರಗಳ ಬಗ್ಗೆ ಪ್ರಮಾಣ ಮಾಡಲಿ ಎಂದು ಸವಾಲು ಎಸೆದ್ರು. ಇನ್ನು ಈ ಸಂದರ್ಭದಲ್ಲಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಂಚಾಲಕ ಶೇಖರ್ ಲಾಯಿಲ ಉಪಸ್ಥಿತರಿದ್ದರು.