Monday, May 20, 2024
HomeUncategorizedಸುಳ್ಯದ ಬೆಳ್ಳಾರೆಯ ಕಲಾವಿದನ ಕೈಚಳಕದಲ್ಲಿ ಮೂಡಿ ಬಂದ ಅಪರೂಪದ ಬಾವಿ

ಸುಳ್ಯದ ಬೆಳ್ಳಾರೆಯ ಕಲಾವಿದನ ಕೈಚಳಕದಲ್ಲಿ ಮೂಡಿ ಬಂದ ಅಪರೂಪದ ಬಾವಿ

spot_img
- Advertisement -
- Advertisement -

ಸುಳ್ಯ: ಕರಾವಳಿಯ ಮನೆಗಳು ಅಂದಾಕ್ಷಣ ಕಣ್ಣ ಮುಂದೆ ಬರೋದು ಒಂದು ತುಳಸಿ ಕಟ್ಟೆ, ಅಂಗಳದ ಮೂಲೆಯಲ್ಲೊಂದು ಬಾವಿ. ಇಂದು ಬಾವಿಗಳ ಜಾಗವನ್ನು ಬೋರ್ ವೆಲ್ ಗಳು ಆಕ್ರಮಿಸಿಕೊಂಡರೂ ಹಳ್ಳಿಗಳ ಹೆಚ್ಚಿನ ಮನೆಗಳಲ್ಲಿ ಬಾವಿಗಳು ಕಾಣ ಸಿಗುತ್ತವೆ. ಬಾವಿ ನೀರಿನ ರುಚಿ ಕುಡಿದವನೇ ಬಲ್ಲ.

ನೀವೆಲ್ಲಾ ಬೇರೆ ಬೇರೆ ರೀತಿಯ ಬಾವಿಗಳು ನೋಡಿರುತ್ತೀರಾ. ಆದರೆ ಈ ರೀತಿಯ ವಿಭಿನ್ನವಾದ ಬಾವಿ ನೀವು ನೋಡಿರೋದಕ್ಕೆ ಸಾಧ್ಯವಿಲ್ಲ. ಅಂದ್ಹಾಗೆ ಈ ಬಾವಿ ಇರೋದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಸರಸ್ವತಿ ಮೂಲೆ ಎಂಬಲ್ಲಿ. ಚಿತ್ರ ಕಲಾವಿದ ಬೆಳ್ಳಾರೆಯ ಕಲಾಸುಮ ಆರ್ಟ್ಸ್ ನ ಮುಖ್ಯಸ್ಥ ಪದ್ಮನಾಭ ನಾಯ್ಕ ಅವರ ಪರಿಕಲ್ಪನೆಯಲ್ಲಿ ಇಂತಹದ್ದೊಂದು ಅದ್ಭುತವಾದ ಬಾವಿ ಮೂಡಿ ಬಂದಿದೆ.

ಅಂದ್ಹಾಗೆ ಪದ್ಮನಾಭ ನಾಯ್ಕ ಅವರದ್ದು ತುಂಬು ಕುಟುಂಬ. ಹಿರಿಯರಿಗೆ ಮನೆಯಲ್ಲಿ ಬಾವಿ ಇದ್ದರೆ ಅದರ ನೀರನ್ನು ಕುಡಿದರೆ ಏನೋ ಒಂಥರಾ ಖುಷಿ. ಹಾಗೆಯೇ ಪದ್ಮನಾಭ ನಾಯ್ಕ ಅವರ ತಂದೆ ಕೂಡ ನಮ್ಮ ಮನೆಯಲ್ಲಿ ಕೂಡ ಒಂದು ಬಾವಿ ಇದ್ದರೆ ಚೆನ್ನಾಗಿರುತ್ತೆ ಅನ್ನೋ ಆಸೆಯನ್ನು ಪದ್ಮನಾಭ ನಾಯ್ಕ ಅವರ ಮುಂದೆ ವ್ಯಕ್ತಪಡಿಸಿದ್ರು. ತಂದೆ ಮಾತು ಪದ್ಮನಾಭ ಅವರಿಗೆ ಸರಿ ಅನ್ನಿಸಿತು. ಬಳಿಕ ಕೊಳ್ತಿಗೆ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆಯಡಿ ಬಾವಿ ನಿರ್ಮಿಸಿಕೊಳ್ಳಲು ಅರ್ಜಿ ಸಲ್ಲಿಸಿದರು.

ಆದರೆ ಅವರು ಅರ್ಜಿ ಸಲ್ಲಿಸುವ ಸಮಯದಲ್ಲಿ ಕೋವಿಡ್ ಸಂಕಷ್ಟವಿದ್ದರಿಂದ ಬಾವಿ ನಿರ್ಮಾಣ ಕಾರ್ಯಕ್ಕೆ ಕೊಂಚ ಅಡ್ಡಿಯಾಯಿತು. ಈ ಎಲ್ಲಾ ಸವಾಲುಗಳ ನಡುವೆ ಪದ್ಮನಾಭ ನಾಯ್ಕ ಸೇರಿದಂತೆ 8 ಜನ ಸಹೋದರರು ಸೇರಿ ಬಾವಿ ನಿರ್ಮಾಣದ ಕೆಲಸವನ್ನು ಶುರು ಮಾಡಿಯೇ ಬಿಟ್ಟರು. ಅದರಂತೆ ಸುಮಾರು 1 ತಿಂಗಳ ಕಾಲ ನಿರಂತರ ಪರಿಶ್ರಮದಿಂದ 35 ಅಡಿ ಆಳದ ಬಾವಿ ನಿರ್ಮಿಸಿದರು. ನೀರು ಬೇಕಾದಷ್ಟು ಸಿಕ್ಕಿದ್ದರಿಂದ ಮನೆ ಮಂದಿಯೆಲ್ಲಾ ಖುಷಿಯಾದ್ರು. 34 ರಿಂಗಗಳನ್ನು ಬಾವಿಗೆ ಅಳವಡಿಸಿದರು.

ಬಾವಿಯೇನೋ ಸಿದ್ಧವಾಯ್ತು. ನಾನು ಹೇಗೂ ಕಲಾವಿದ ಈ ಬಾವಿಯನ್ನು ಹಾಗೇ ಬಿಟ್ಟರೆ ಚೆನ್ನಾಗಿರಲ್ಲ. ಈ ಬಾವಿಗೊಂದು ಹೊಸ ರೂಪ ನೀಡಬೇಕು ಎಂದು ನಿರ್ಧರಿಸಿದ ಪದ್ಮನಾಯ್ಕ ಅವರು ಬಾವಿಯ ಮೇಲ್ಭಾಗಕ್ಕೆ ರಿಂಗ್ ಆವರಣ ಮಾಡಿ,ಅದಕ್ಕೆ ಕಂಚಿನ ಪಾತ್ರೆ(ಉರ್ಲಿ)ಯ ರೂಪ ನೀಡಿದ್ದಾರೆ. ಅದೇ ರೀತಿಯ ಬಣ್ಣ ಬಳಿಯಲಾಗಿದೆ. ದೂರದಿಂದ ನೋಡಿದಾಗ ದೊಡ್ಡ ಪಾತ್ರೆ ಇರಿಸಿದಂತೆ ಭಾಸವಾಗುತ್ತದೆ.

ಇನ್ನು ಈ ಬಾವಿ ನಿರ್ಮಾಣದ ಕಾರ್ಯಕ್ಕೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಪದ್ಮನಾಭ ನಾಯ್ಕ ಅವರ ಕುಟುಂಬಕ್ಕೆ 67 ಸಾವಿರ ರೂಪಾಯಿ ಅನುದಾನ ಲಭಿಸಲಿದೆ. ಒಟ್ಟಿನಲ್ಲಿ ಈ ಸುಂದರವಾದ ಬಾವಿ ಎಲ್ಲರನ್ನು ಸೆಳೆಯುತ್ತಿದ್ದು ಅಪರೂಪದ ಬಾವಿ ನೋಡಲೆಂದೇ ಪದ್ಮನಾಭ ಅವರ ಮನೆ ಸಾಕಷ್ಟು ಮಂದಿ ಭೇಟಿ ನೀಡುತ್ತಿದ್ದಾರೆ.

- Advertisement -
spot_img

Latest News

error: Content is protected !!