ನವದೆಹಲಿ : ಪಿಜ್ಜಾ ಡೆಲಿವರಿ ಪಡೆಯುವವರಿಗೆ, ಅಗತ್ಯ ವಸ್ತುಗಳನ್ನು ಹೋಮ್ ಡೆಲಿವರಿ ಪಡೆಯುವವರೇ ಎಚ್ಚರ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪಿಜ್ಜಾ ಡೆಲವರಿ ಮಾಡಿದ್ದವನಿಗೆ ಮಾರಕ ಕೊರೊನಾ ಸೋಂಕು ಪಾಸಿಟಿವ್ ಬಂದಿದ್ದು, ಹೆಚ್ಚಿನ ಆತಂಕ ಎದುರಾಗಿದೆ.
ದೇಶಾದ್ಯಂತ ಮಾರಕ ಕೊರೊನಾ ಸೋಂಕು ತಲ್ಲಣ ಸೃಷ್ಟಿಸಿದ್ದು, ಜನತೆ ಆತಂಕಗೊಂಡಿದ್ದಾರೆ. ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಪರಿಸ್ಥಿತಿ ನಿಯಂತ್ರಣ ನಿಜಕ್ಕೂ ಸವಾಲಾಗಿ ಪರಿಣಮಿಸಿದೆ. ಏತನ್ಮಧ್ಯೆ, ದೆಹಲಿಯಲ್ಲಿ ಪಿಜ್ಜಾ ಡೆಲವರಿ ಮಾಡುವ ವ್ಯಕ್ತಿಯೊಬ್ಬನಲ್ಲಿ ಮಾರಕ ಸೋಂಕು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ದೆಹಲಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ದೆಹಲಿಯ ಮಾಳವೀಯ ನಗರದಲ್ಲಿ ಈತ ಪಿಜ್ಜಾ ಡೆಲವರಿ ಮಾಡಿದ್ದ ಎಂಬ ಮಾಹಿತಿಯನ್ನು ಕಲೆಹಾಕಿದ್ದು, ಸುಮಾರು 72 ಕುಟುಂಬಗಳಿಗೆ ಕ್ವಾರೆಂಟೈನ್ ಮಾಡಲಾಗಿದೆ. ಈ ಕುಟುಂಬಗಳ ಸಂಪರ್ಕಕ್ಕೆ ಬಂದಿದ್ದವರನ್ನು ಪತ್ತೆ ಹಚ್ಚುತ್ತಿದ್ದು, ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ದಕ್ಷಿಣ ದೆಹಲಿಯಲ್ಲಿ ತೀವ್ರ ತಲ್ಲಣ ಸೃಷ್ಟಿಯಾಗಿದೆ.