ಕುಂದಾಪುರ: ಅಪ್ರಾಪ್ತ ವಯಸ್ಕಳನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಮಾಡಿ ವಂಚಿಸಿದ ಘಟನೆ ಸ್ಥಳೀಯ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಆರೋಪಿಗೆ ನ್ಯಾಯಾಲಯ 20 ವರ್ಷ ಕಠಿನ ಸಜೆ ನೀಡಿದೆ.
ಆರೋಪಿ ಮಿಥನ್(21) ಎಂದು ತಿಳಿದು ಬಂದಿದೆ.
17ರ ಹರೆಯದ ನೊಂದ ಬಾಲಕಿಯನ್ನು ಕಾಲೇಜಿಗೆ ಹೋಗುವಾಗ ಸಂಪರ್ಕಿಸಿದ ಮಿಥುನ್ ಮದುವೆಯಾಗುವುದಾಗಿ ನಂಬಿಸಿ ಮನೆಗೆ ಕರೆದೊಯ್ದು ಆಕೆಯ ಇಚ್ಛೆಗೆ ವಿರುದ್ಧವಾಗಿ ದೈಹಿಕ ಸಂಪರ್ಕ ನಡೆಸಿದ್ದ ಎನ್ನಲಾಗಿದೆ. ಬಾಲಕಿಯ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ಕರೆದೊಯ್ದಾಗ ಗರ್ಭಿಣಿ ಎಂದು ಗೊತ್ತಾಗಿತ್ತು. ಆಕೆಯ ತಂದೆ ನೀಡಿದ್ದ ದೂರಿನ ಮೇಲೆ ಕುಂದಾಪುರ ಇನ್‌ಸ್ಪೆಕ್ಟರ್ ನಂದಕುಮಾರ್ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶ ಶ್ರೀನಿವಾಸ ಸುವರ್ಣ, ಅಭಿಯೋಜನೆ ಪರ ಸಲ್ಲಿಸಿದ 30 ಸಾಕ್ಷಿಗಳ ಪೈಕಿ 16 ಸಾಕ್ಷಿಗಳನ್ನು ವಿಚಾರಿಸಿ, ವಾದ ಆಲಿಸಿ, ಡಿಎನ್‌ಎ ಸಾಕ್ಷéವನ್ನು ಪರಿಗಣಿಸಿ ಆರೋಪಿ ದೋಷಿ ಎಂದು ತೀರ್ಪು ನೀಡಿದ್ದಾರೆ. ಅಪರಾಧಿಗೆ 20 ವರ್ಷಗಳ ಸಜೆ, 21 ಸಾವಿರ ರೂ. ದಂಡ ವಿಧಿಸಿದ್ದಾರೆ. ದಂಡದ ಮೊತ್ತದಲ್ಲಿ 15 ಸಾವಿರ ರೂ. ಬಾಲಕಿಗೆ, 6 ಸಾವಿರ ರೂ. ಸರಕಾರಕ್ಕೆ ಸಲ್ಲಿಸುವಂತೆಯೂ ನೊಂದ ಬಾಲಕಿಗೆ ಸರಕಾರದಿಂದ 2 ಲಕ್ಷ ರೂ. ನೀಡುವಂತೆಯೂ ಆದೇಶಿಸಿದ್ದಾರೆ. ಸರಕಾರದ ಪರ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ. ರಾಘವೇಂದ್ರ ವಾದಿಸಿದ್ದರು.