ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಗೆ ಶುಕ್ರವಾರ ಜಾಮೀನು ಮಂಜೂರಾಗಿತ್ತು. ಈ ಹಿನ್ನೆಲೆ ಇಂದು ಬಿಜಿಎಸ್ ಆಸ್ಪತ್ರೆಯಿಂದ ನೇರವಾಗಿ 57ನೇ ಸಿಸಿಹೆಚ್ ಕೋರ್ಟ್‌ಗೆ ತೆರಳಿ ಜಾಮೀನು ಪ್ರಕ್ರಿಯೆ ಮುಗಿಸಿ ದರ್ಶನ್ ವಾಪಸ್ ಬಿಜಿಎಸ್ ಆಸ್ಪತ್ರೆಗೆ ತೆರಳಿದ್ದಾರೆ.
57 ಸಿಸಿಹೆಚ್ ಕೋರ್ಟ್ ಒಳಗೆ ಬಂದ ದರ್ಶನ್ ಅವರು ನ್ಯಾಯಾಧೀಶರು ಬೆಂಚ್‌ನಲ್ಲಿ ಇಲ್ಲದ ಕಾರಣ ಕಾದು ಕುಳಿತಿದ್ದರು. ಉಳಿದ ಪ್ರಕರಣವನ್ನು ಕೈಗೆತ್ತಿಕೊಂಡ ನ್ಯಾಯಾಧೀಶರು, ಮುಗಿಯುವವರೆಗೂ ಇರಿ ಎಂದು ದರ್ಶನ್ ಅವರನ್ನು ಕೂರಿಸಿದ್ದರು. ಜಡ್ಜ್ ಜೈ ಶಂಕರ್ ಎದುರು ಆರೋಪಿ ದರ್ಶನ್ ಅವರು ಕೆಲ ಹೊತ್ತು ನಿಂತೇ ಇದ್ದರು.
ದರ್ಶನ್ ಪರ ವಕೀಲರು ಕೋರ್ಟ್ ಅಲ್ಲಿ ಜನಸಾಗರ ಸೇರಿರುವುದರಿಂದ ಆರೋಪಿಯಿಂದ ಸಹಿ ಪಡೆಯಲು ಮನವಿ ಮಾಡಿದರು. ಈ ಮನವಿ ಸ್ವೀಕಾರ ಮಾಡಿದ ಜಡ್ಜ್, ಕೋರ್ಟ್ ಹಾಲ್ ಅಲ್ಲೇ ಸಹಿ ಪಡೆಯಲು ಸಿಬ್ಬಂದಿಗೆ ಸೂಚನೆ ನೀಡಿದರು.
ಸಾಮಾನ್ಯವಾಗಿ ಆರೋಪಿಗಳು ಜಾಮೀನು ಬಾಂಡ್ ಸಹಿ ಹಾಕಲು ಪೆಂಡಿಂಗ್ ಬ್ರಾಂಚ್‌ಗೆ ತೆರಳಬೇಕಿತ್ತು. ಆದರೆ ಜನಸಾಗರ ಸೇರಿರುವ ಕಾರಣ ದರ್ಶನ್ ಪರ ವಕೀಲರು ಕೋರ್ಟ್ ಹಾಲ್‌ನಲ್ಲೇ ಸಹಿ ಹಾಕಲು ಮನವಿ ಮಾಡಿದ್ದು, ನ್ಯಾಯಾಲಯ ದರ್ಶನ್ ಮನವಿಯನ್ನ ಸ್ವೀಕಾರ ಮಾಡಿದರು. ಅಂತಿಮವಾಗಿ ಕೋರ್ಟ್ ಹಾಲ್‌ನಲ್ಲೇ ಸಹಿ ಮಾಡಿದ ದರ್ಶನ್ ಅವರು ಕೋರ್ಟ್‌ನಿಂದ ಬಹಳ ಕಷ್ಟಪಟ್ಟು ಹೊರಗಡೆ ಬಂದರು. ದರ್ಶನ್ ಗೆ ಆಪ್ತ ಮಿತ್ರ ಧನ್ವೀರ್ ಹಾಗೂ ಸಹೋದರ ದಿನಕ್ರ ತೂಗುದೀಪ್ ಈ ವೇಳೆ ಸಾಥ್ ನೀಡಿದ್ರು.