ಮಂಗಳೂರು, ಎ.19: ಬಂಟ್ವಾಳ ತಾಲೂಕಿನ ಕಸಬಾ ಗ್ರಾಮದ ಸುಮಾರು 45 ವರ್ಷ ಪ್ರಾಯದ ಮಹಿಳೆಯೊಬ್ಬರು ರವಿವಾರ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಅವರಿಗೆ ಕೊರೋನ ವೈರಸ್ ಸೋಂಕು ತಗುಲಿತ್ತು ಎನ್ನಲಾಗಿದೆ. ಇದರೊಂದಿಗೆ ಕೊರೋನ ವೈರಸ್ ದ.ಕ. ಜಿಲ್ಲೆಯಲ್ಲಿ ಮೊದಲ ಬಲಿ ಪಡೆದಂತಾಗಿದೆ.
ಈ ಮಹಿಳೆಗೆ ಕೆಲವು ದಿನಗಳಿಂದ ಉಸಿರಾಟದ ತೊಂದರೆಯಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಬಂಟ್ವಾಳದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ವೆನ್ಲಾಕ್ ಗೆ ದಾಖಲಿಸಲಾಗಿತ್ತು. ಅವರ ಗಂಟಲಿನ ದ್ರವವನ್ನು ಪರೀಕ್ಷೆಗೊಳಪಡಿಸಿದಾಗ ಪಾಸಿಟಿವ್ ಬಂದಿದ್ದು, ಈ ಮಧ್ಯೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಈಗ ಮೃತಳ ಪತಿ ಮತ್ತು ಮಗನನ್ನು ಕ್ವಾರಂಟೈನ್ ಮಾಡಲಾಗಿದೆ. ಮೃತಳ ಅತ್ತೆಯ ಸ್ಥಿತಿ ಗಂಭೀರವಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಮೂವರ ಗಂಟಲು ದ್ರವವನ್ನು ಸಂಗ್ರಹಿಸಿ ಪರೀಕ್ಷೆ ಕಳುಹಿಸಲಾಗಿದೆ. ಮೃತ ಮಹಿಳೆ ಮಗ ಮಾರ್ಚ್ 16 ರಂದು ದುಬೈನಿಂದ ಬಂದಿದ್ದು, ಈತನಿಂದಲೇ ಸೋಂಕು ಬಂದಿರಬಹುದಾ ಎಂದು ಶಂಕಿಸಲಾಗುತ್ತಿದೆ.
ಕೊರೊನಾಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಮಹಿಳೆ ಮೃತಪಟ್ಟ ಹಿನ್ನೆಲೆಯಲ್ಲಿ ಬಂಟ್ವಾಳ ಕೆಳಗಿನ ಪೇಟೆ ಸೀಲ್‍ಡೌನ್ ಮಾಡಲಾಗಿದೆ. ಸೀಲ್ ಡೌನ್ ಆಗಿದೆ, ಯಾರು ಮನೆಯಿಂದ ಹೊರಬರಬೇಡಿ ಎಂದು ಪೊಲೀಸರು ಜೀಪ್ ನಲ್ಲಿ ಎಚ್ಚರಿಕೆ ನೀಡುತ್ತಿದ್ದಾರೆ.
ಜಿಲ್ಲೆಯಲ್ಲಿ ಈಗಾಗಲೆ 13 ಕೊರೋನ ಸೋಂಕಿತರ ಪೈಕಿ 12 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಓರ್ವ ಚಿಕಿತ್ಸೆ ಪಡೆಯುತ್ತಿದ್ದಾರೆ.