ಮೂಡಬಿದಿರೆ: ಮಂಗಳೂರು-ಮೂಡಬಿದಿರೆ-ಕಾರ್ಕಳ ಮಾರ್ಗದಲ್ಲಿ ಆರಂಭವಾಗಿರುವ ಕೆಎಸ್ ಆರ್ ಟಿಸಿ ಬಸ್ ಸಂಚಾರದಿಂದ ಈಗ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನಡುವೆ ಕ್ರೆಡಿಟ್ ಫೈಟ್ ಶುರುವಾಗಿದೆ.
ಎರಡೂ ಪಕ್ಷಗಳಿಂದ ಒಂದೇ ಬಸ್ಸಿಗೆ ಮೂರು ಕಡೆಗಳಲ್ಲಿ ಭರ್ಜರಿ ಸ್ವಾಗತ ಕೋರಲಾಗಿದ್ದು, ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಮತ್ತು ಕಾಂಗ್ರೆಸ್ ಮುಖಂಡರ ನಡುವೆ ಬಸ್ ತರಿಸಿದ್ದು ನಾವೇ ಎಂಬ ವಾರ್ ಶುರುವಾಗಿದೆ.
ಕೆಎಸ್ಆರ್ ಟಿಸಿ ಬಸ್ ಗೆ ಮಂಗಳೂರು ಹಾಗೂ ಮೂಡಬಿದಿರೆಯಲ್ಲಿ ಕಾಂಗ್ರೆಸ್ ಮುಖಂಡರಿಂದ ಸ್ವಾಗತ ಕೋರಲಾಗಿದ್ದರೆ, ಮೂಡುಬಿದಿರೆಯಲ್ಲಿ ಬಿಜೆಪಿ ಶಾಸಕರು ಮತ್ತು ಕಾರ್ಯಕರ್ತರಿಂದ ಸ್ವಾಗತ ಕೋರಲಾಗಿದೆ.
ಅಭಿವೃದ್ಧಿ ವಿಚಾರದಲ್ಲಿ ನಾನು ರಾಜಕಾರಣ ಮಾಡುವುದಿಲ್ಲ, ಬೇರೆ ಬೇರೆ ಜನರು ನಾವು ಮಾಡಿದ್ದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಗಳನ್ನು ಹರಿದಾಡಿಸುತ್ತಿದ್ದಾರೆ, ಕೆಲವರಿಗೆ ಯಾರೋ ಮಾಡಿದ ಮಗುವಿಗೆ ನಾನು ಅಪ್ಪ ಎಂಬ ಖುಷಿ, ನಾನು ಐದು ವರ್ಷಗಳ ಹಿಂದೆಯೇ ಭರವಸೆ ನೀಡಿದ್ದೆ, ಜನರ ಮಾತನ್ನು ಉಳಿಸಿದ್ದೇವೆ ಎನ್ನುವ ತೃಪ್ತಿ ನಮ್ಮಲ್ಲಿದೆ ಎಂದು ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದ್ದಾರೆ.
ಇದೇ ವೇಳೆ, ಶಾಸಕ ಉಮಾನಾಥ್ ಕೋಟ್ಯಾನ್ ಹೇಳಿಕೆಗೆ ಮೂಡಬಿದಿರೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ತಿರುಗೇಟು ನೀಡಿದ್ದು, ನನ್ನ ಪ್ರಯತ್ನದ ಫಲದಿಂದ ಸರ್ಕಾರಿ ಬಸ್ ಬಂದಿದ್ದು, ಸತತ ಆರು ತಿಂಗಳಿನಿಂದ ಕೆಎಸ್ ಆರ್ ಟಿಸಿ ಬಸ್ಸಿಗಾಗಿ ಹೋರಾಟ ಮಾಡಿದ್ದು ಶಕ್ತಿ ಯೋಜನೆಯಡಿ ಬಸ್ ಸಂಚಾರ ಆರಂಭವಾಗಿದೆ ಎಂದು ಹೇಳಿದ್ದಾರೆ.