ಬೆಳ್ತಂಗಡಿ: ಕೊರೊನಾ ವೈರಸ್ (ಕೋವಿಡ್-19) ಹರಡದಂತೆ ತಡೆಯಲು ತಾಲೂಕಿನ ಎಲ್ಲ ಗಡಿಭಾಗದ ಚೆಕ್ ಪೋಸ್ಟ್ ಗಳಲ್ಲಿ ಪ್ರವೇಶಿಸುವ ಸಾರ್ವಜನಿಕರನ್ನು ಕಡ್ಡಾಯವಾಗಿ ತಪಾಸಣೆ ನಡೆಸಬೇಕು ಎಂದು ತಹಶೀಲ್ದಾರ್ ಗಣಪತಿ ಶಾಸ್ತ್ರಿ ಆದೇಶಿಸಿದ್ದಾರೆ.
ಇಂದು ಅವರು ಹೊರಡಿಸಿರುವ ಆದೇಶದ ಪ್ರಕಟಣೆಯಲ್ಲಿ ತಪಾಸಣೆ ಸಮಯದಲ್ಲಿ ಪಾಸ್ ಇಲ್ಲದೇ ಪ್ರವೇಶಿಸುವವರ ವಿರುದ್ಧ ಮೊಕದ್ದಮೆ ದಾಖಲಿಸುವುದು, ಪಾಸ್ ಹೊಂದಿರುವವರು ಬೇರೆ ಜಿಲ್ಲೆ ಅಥವಾ ರಾಜ್ಯದಿಂದ ತಾಲೂಕಿಗೆ ಪ್ರವೇಶಿಸುವವರ ಮಾಹಿತಿ ಸಂಗ್ರಹಿಸಿ ಪ್ರತಿದಿನ ಆರೋಗ್ಯ ಇಲಾಖೆಗೆ ನೀಡಬೇಕು. ತಾಲೂಕು ಆರೋಗ್ಯಾಧಿಕಾರಿಗಳಿಗೆ ಅಂತಹವರ ಮಾಹಿತಿ ದೊರಕಿದ ತಕ್ಷಣ ಅವರ ಹಾಗೂ ಕುಟುಂಬದ ಸದಸ್ಯರಿಗೆ ಹೋಮ್ ಕ್ವಾರಂಟೈನ್ ಸ್ಟ್ಯಾಂಪ್ ಹಾಕಬೇಕು ಎಂದು ಹೇಳಿದ್ದಾರೆ.
ಹೋಮ್ ಕ್ವಾರಂಟೈನ್ ಆದ ವ್ಯಕ್ತಿಯು ವಾಸಿಸುವ ಮನೆಯನ್ನು ಸಂಪೂರ್ಣವಾಗಿ ಕ್ವಾರಂಟೈನ್ ಮಾಡಿ 14 ದಿನಗಳವರೆಗೆ ಮನೆಯಿಂದ ಹೊರಬಾರದಂತೆ ಸೂಚಿಸಿ ಮನೆಯ ಎದುರು ಕ್ವಾರಂಟೈನ್ ನೋಟಿಸ್ ಅಂಟಿಸಬೇಕು. ಈ ಬಗ್ಗೆ ಅಕ್ಕ ಪಕ್ಕದ ಮನೆಗಳಿಗೂ ನೋಟಿಸ್ ನೀಡಬೇಕು. ಕ್ವಾರಂಟೈನ್ ಆದ ಮನೆಯಿಂದ ಹೊರಬಂದು ಸಾರ್ವಜನಿಕ ಸ್ಥಳಕ್ಕೆ ತೆರಳಿದರೆ ಪೊಲೀಸರು ಎಫ್‍ಐಆರ್ ದಾಖಲಿಸಬೇಕು ಎಂದು ತಹಶೀಲ್ದಾರ್ ಸೂಚಿಸಿದ್ದಾರೆ.
ಅಗತ್ಯ ಸಾಮಾಗ್ರಿಗಳಿಗಾಗಿ ಹೋಮ್ ಕ್ವಾರಂಟೈನ್ ಆದ ಮನೆಯವರು ಹೊರಗೆ ಬಾರದೆ ಬಂಧುಗಳಿಂದ, ಸ್ನೇಹಿತರಿಂದ ವ್ಯವಸ್ಥೆ ಮಾಡಿಕೊಳ್ಳುವುದು ಹಾಗೆಯೇ ಆ ಮನೆಯ ಸದಸ್ಯರ ನಿರಂತರ ಆರೋಗ್ಯ ತಪಾಸಣೆ ಮಾಡುವಂತೆ ಆರೋಗ್ಯ ಇಲಾಖೆಗೆ ಹೇಳಲಾಗಿದೆ. ಒಂದು ವೇಳೆ ಅನ್ಯ ಮಾರ್ಗದ ಮೂಲಕ ತಪಾಸಣೆಗೆ ಒಳಪಡದೇ ಅನ್ಯ ಜಿಲ್ಲೆ ಅಥವಾ ರಾಜ್ಯದಿಂದ ಬಂದು ತಾಲೂಕಿಗೆ ಪ್ರವೇಶಿಸಿದ್ದಲ್ಲಿ ಅಂತಹವರ ಗುರುತಿಸಿ ಆರೋಗ್ಯ ಸಿಬ್ಬಂದಿಗೆ, ಪೊಲೀಸ್, ತಾಲೂಕು ವಾರ್‍ರೂಮ್‍ಗೆ ಮಾಹಿತಿ ನೀಡಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.