ಮಂಗಳೂರು, ಏಪ್ರಿಲ್ 17: ಐರ್ಲೆಂಡ್ ನಲ್ಲಿ ನಡೆದ ಅಪಘಾತದಲ್ಲಿ ಮಂಗಳೂರು ಮೂಲದ 34 ವರ್ಷದ ಲಾಯಲ್ ಸಿಕ್ವೇರಾ ಎಂಬುವರು ಸಾವನ್ನಪ್ಪಿದ್ದು, ಪತಿ ಸಾವಿನ ಸುದ್ದಿ ತಿಳಿದು ಆಘಾತದಿಂದ ಪತ್ನಿಯೂ ಮೃತಪಟ್ಟಿರುವ ಘಟನೆ ನಡೆದಿದೆ.
ಏಪ್ರಿಲ್ 15ರಂದು ಡಬ್ಲಿನ್‌ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಲಾಯಲ್ ಸಾವನ್ನಪ್ಪಿದ್ದರು. ಪತಿಯ ಸಾವಿನ ಸುದ್ದಿ ಕೇಳಿ ಆಘಾತಕ್ಕೊಳಗಾದ ಪತ್ನಿ ಶರೋನ್ ಸಿಕ್ವೇರಾ (36) ಅವರು ಏ.16 ರಂದು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.
2016ರಲ್ಲಿ ಮದುವೆಯಾಗಿ ಐರ್ಲೆಂಡ್ ನಲ್ಲಿ ನೆಲೆಸಿದ್ದ ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಲಾಯಲ್ ಅವರ ತಂದೆ ಲಿಗೊರಿ ಮತ್ತು ಲಿಲ್ಲಿ ಸಿಕ್ವೇರಾ ಅವರು ಸದ್ಯ ಡಬ್ಲಿನ್ ನಲ್ಲೇ ನೆಲೆಸಿದ್ದಾರೆ. ಅವರ ಪತ್ನಿ ಶರೋನ್ ಚಲನಚಿತ್ರ ನಿರ್ಮಾಪಕ ಮತ್ತು ಮೊಸಾಕೊ ಶಿಪ್ಪಿಂಗ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಫ್ರಾಂಕ್ ಫೆರ್ನಾಂಡಿಸ್ ಮತ್ತು ಉಡುಪಿಯ ತೊಟ್ಟಂ ಮೂಲದ ಆಲಿಸ್ ಫರ್ನಾಂಡಿಸ್ ಅವರ ಮಗಳಾಗಿದ್ದಾರೆ.
ಏಪ್ರಿಲ್ 15ರ ಮುಂಜಾನೆ ಲಾಯಲ್, ಅಲ್ಲಿನ ಕೋ ಮೀತ್ ರಸ್ತೆಯ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಕಾರು ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ. ಕಾರು ಚಾಲಕ ಪರಾರಿಯಾಗಿರುವುದಾಗಿ ಐರ್ಲೆಂಡ್‌ನ ಸ್ಥಳೀಯ ಆನ್‌ಲೈನ್ ಸುದ್ದಿ ಮಾಧ್ಯಮ ವರದಿ ಮಾಡಿದೆ.