ಮುಂಬೈ: ಕರೊನಾ ಸೋಂಕಿತನೊಂದಿಗೆ ಸಂಪರ್ಕ ಹಿನ್ನೆಲೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭದ್ರತಾ ಪಡೆಯ 160 ಜನರನ್ನು ಗೃಹ ಬಂಧನಕ್ಕೆ ಒಳಪಡಿಸಲಾಗಿದೆ.
ಸಿಎಂ ನಿವಾಸ ಮಾತೋಶ್ರೀ ಸಮೀಪದಲ್ಲಿ ಚಹಾ ಮಾರುತ್ತಿದ್ದ ವ್ಯಕ್ತಿಯೊಬ್ಬನಲ್ಲಿ ಕರೊನಾ ಸೋಂಕು ಕಂಡು ಬಂದಿದೆ. ಈ ಹಿನ್ನೆಲೆಯ್ಲಲಿ ಸಿಎಂ ಭದ್ರತಾ ಪಡೆಯಲ್ಲಿ ಇದ್ದವರನ್ನು ಕ್ವಾರಂಟೇನ್ಗೆ ಒಳಪಡಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಜತೆಗೆ160 ಜನರ ಗಂಟಲು ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈನ ಕಲಾನಗರದಲ್ಲಿರುವ ಬಾಳಾ ಠಾಕ್ರೆ ನಿವಾಸದ ಬಳಿ ಚಹಾ ಮಾರುತ್ತಿದ್ದ ವ್ಯಕ್ತಿಗೆ ಸೋಂಕು ಕಂಡು ಬಳಿಕ ಆತನನ್ನು ಬಾಂದ್ರಾದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈತನೊಂದಿಗೆ ಸಿಎಂ ಭದ್ರತಾ ದಳದ ಸಿಬ್ಬಂದಿ ಸಂಪರ್ಕಕ್ಕೆ ಬಂದಿರಬಹುದು. ಆ ಕಾರಣದಿಂದಾಗಿ 160 ಜನರನ್ನು ಕ್ವಾರಂಟೈನ್ಗೆ ಗುರಿಪಡಿಸಲಾಗಿದೆ. ಇದರಿಂದ ಯಾರೂ ಆತಂಕ ಪಡಬೇಕಿಲ್ಲ. ಸಂಭಾವ್ಯ ಸೋಂಕು ಗುರುತಿಸಲು ನಿಗಾದಲ್ಲಿ ಇರಿಸುವುದು ಸಾಮಾನ್ಯ ಪ್ರಕ್ರಿಯೆಯಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸದ್ಯ ಸಿಎಂ ಭದ್ರತೆಗೆ ಬೇರೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಹಾಗೂ ಅವರ ದೇಹದ ತಾಪಮಾನವನ್ನು ನಿತ್ಯವೂ ದಾಖಲಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಚಹಾ ಮಾರಾಟಗಾರನೊಂದಿಗೆ ಸಂಪರ್ಕವಿದ್ದ ಆರು ತಿಂಗಳ ಮಗುವನ್ನು ಐಸೋಲೇಷನ್ ವಾರ್ಡ್ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.