ಮುಂಬೈ, ಎ.25: ಏಶ್ಯದ ಅತ್ಯಂತ ದೊಡ್ಡ ಸ್ಲಮ್ ಪ್ರದೇಶವಾಗಿರುವ ಧಾರಾವಿಯಲ್ಲಿ ಕೋವಿಡ್-19 ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗಿದೆ ಎಂದು ವರದಿಯಾಗಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ಧಾರಾವಿ ಪ್ರದೇಶದಲ್ಲಿ ಆರು ಹೊಸ ಪ್ರಕರಣಗಳು ದಾಖಲಾಗಿವೆ. ಗುರುವಾರ 25 ಹೊಸ ಪ್ರಕರಣಗಳು ಕಂಡುಬಂದಿತ್ತು. 2.1 ಚದರ ಕಿ.ಮೀ. ವಿಸ್ತೀರ್ಣ ಹೊಂದಿರುವ ಧಾರಾವಿಯಲ್ಲಿ ಸುಮಾರು 8 ಲಕ್ಷ ಜನರು ಸಣ್ಣ ಮನೆಗಳಲ್ಲಿ ವಾಸಿಸುತ್ತಿದ್ದಾರೆ.
ಧಾರಾವಿಯಲ್ಲಿ ಶುಕ್ರವಾರ ಕೋವಿಡ್-19 ಕಾಯಿಲೆಗೆ ಓರ್ವ ವ್ಯಕ್ತಿ ಮೃತಪಟ್ಟಿದ್ದ. ಇಡೀ ಪ್ರದೇಶದಲ್ಲೀಗ ಒಟ್ಟು 220 ಕೊರೋನ ವೈರಸ್ ಪ್ರಕರಣಗಳು ದಾಖಲಾಗಿದ್ದು, 14 ಮಂದಿ ಮೃತಪಟ್ಟಿದ್ದಾರೆ.
ಧಾರಾವಿಯಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಕಷ್ಟಸಾಧ್ಯವಾಗಿರುವ ಕಾರಣ ಅಧಿಕಾರಿಗಳು ನಿವಾಸಿಗಳ ಸ್ಕ್ರೀನಿಂಗ್, ಐಸೋಲೇಶನ್, ಕ್ವಾರಂಟೈನ್ ಹಾಗೂ ಟೆಸ್ಟಿಂಗ್ ನಡೆಸುತ್ತಿದ್ದಾರೆ. ಬಿಎಂಸಿ ಹಲವು ಕಂಟೈನ್ಮೆಂಟ್ ವಲಯಗಳನ್ನು ರಚಿಸಿ ಔಷಧಿ ಸೇರಿದಂತೆ ಹಲವು ಅಗತ್ಯವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡುತ್ತಿದೆ.