ಭಾರತಕ್ಕೆ ಹೊರದೇಶಗಳಿಂದ ಬಂದ ಪ್ರಯಾಣಿಕರಿಂದ ಕೊರೋನಾ ವೈರಸ್ ಸೋಂಕು ಮೊದಲ ಬಾರಿಗೆ ತಗುಲಿದೆ. ವಿದೇಶಗಳಿಂದ ಬರುತ್ತಿದ್ದ ನಾಗರಿಕರನ್ನು ಆರಂಭದಿಂದಲೇ ತೀವ್ರ ಕಟ್ಟುನಿಟ್ಟಾಗಿ ನಿರ್ಬಂಧದಲ್ಲಿರಿಸಿದ್ದರೆ ಇಷ್ಟೊಂದು ಸಂಖ್ಯೆಯಲ್ಲಿ ಹರಡುತ್ತಿರಲಿಲ್ಲ ಎಂಬುದು ಎಲ್ಲರ ಅನಿಸಿಕೆಯಾಗಿದೆ. ಸರ್ಕಾರ ಕ್ರಮ ಕೈಗೊಳ್ಳುವಲ್ಲಿ ವಿಳಂಬ ಮಾಡಿತು ಎಂದು ಆರೋಪಿಸುವವರೂ ಇದ್ದಾರೆ.
ಹೀಗೆ ದುಬೈಯಿಂದ ಭಾರತಕ್ಕೆ ಬಂದವರಲ್ಲಿ ಹೆಚ್ಚಿನ ಮಂದಿಯಲ್ಲಿ ಕೊರೋನಾ ಸೋಂಕು ಹರಡಿದೆ ಎಂದು ಅಧ್ಯಯನವೊಂದು ಹೇಳುತ್ತದೆ. ಭಾರತದಲ್ಲಿ ಇದುವರೆಗೆ ದೃಢಪಟ್ಟ ಕೊರೋನಾ ಸೋಂಕಿತರ ಸಂಖ್ಯೆ 873 ಆಗಿದೆ. ಇವರಲ್ಲಿಸುಮಾರು 100 ಮಂದಿ ದುಬೈಯಿಂದ ಬಂದವರಾಗಿದ್ದಾರೆ. ಅಲ್ಲಿಂದ ಅನೇಕ ವಲಸಿಗ ಭಾರತೀಯರು ಬಂದಿದ್ದಾರೆ. ಯುರೋಪ್ ಮತ್ತು ಅಮೆರಿಕಾದಿಂದ ಬರುವ ಅನಿವಾಸಿ ಭಾರತೀಯರಿಗೆ ದುಬೈ ಪ್ರಮುಖ ಸಂಚಾರ ಕೇಂದ್ರವಾಗಿದೆ.
ದುಬೈಯಿಂದ ಭಾರತಕ್ಕೆ ವಾಪಸ್ಸಾದವರಲ್ಲಿ ಬಹುತೇಕ ಮಂದಿಯಲ್ಲಿ ಕೊರೋನಾ ಕಾಣಿಸಿಕೊಂಡಿದ್ದು, ನಂತರದ ಸ್ಥಾನಗಳಲ್ಲಿ ಇಂಗ್ಲೆಂಡ್, ಇಟಲಿ, ಸೌದಿ ಅರೇಬಿಯಾ ಮತ್ತು ಅಮೆರಿಕಾವಿದೆ. ಕೊರೋನಾ ವೈರಸ್ ತಡೆಗೆ ಭಾರತ ಸರ್ಕಾರ ಮಾರ್ಚ್ ತಿಂಗಳ ಆರಂಭದಿಂದಲೇ ಲಾಕ್ ಡೌನ್ ಮಾಡಿದ್ದಿದ್ದರೆ ಇಷ್ಟೊಂದು ಹರಡುತ್ತಿರಲಿಲ್ಲ ಎಂದು ಗಜಿಯಾಬಾದ್ ನ ಸಂತೋಷ್ ವೈದ್ಯಕೀಯ ವಿಜ್ಞಾನ ಸಂಶೋಧನಾ ಸಂಸ್ಥೆಯ ಡಾ ಅನುಪಮ್ ಸಿಂಗ್ ಹೇಳುತ್ತಾರೆ.