
ರಾಯಚೂರು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರಿಗೆ ಸ್ವಾಗತ ಕೋರಿರುವ ಫ್ಲೆಕ್ಸ್ ಗಳಲ್ಲಿ ಕಾಂಗ್ರೆಸ್ ಪಕ್ಷದ ಸಚಿವರು ಮತ್ತು ಶಾಸಕರ ಫೋಟೋಗಳು ರಾರಾಜಿಸಿವೆ.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಗಣೇಶ ವಿಸರ್ಜನೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ತೆರಳಿರುವ
ಬೆಳ್ತಂಗಡಿ ಕ್ಷೇತ್ರದ ಬಿಜೆಪಿ ಶಾಸಕ ಹರೀಶ್ ಪೂಂಜ ಅವರಿಗೆ ಸ್ವಾಗತ ಕೋರಿ ಮಾನ್ವಿಯಲ್ಲಿ ಹಲವು ಫ್ಲೆಕ್ಸ್ ಗಳನ್ನು ಅಳವಡಿಸಲಾಗಿದೆ.
ಬಿಜೆಪಿ ಶಾಸಕ ಹರೀಶ್ ಪೂಂಜ ಅವರಿಗೆ ಸ್ವಾಗತ ಕೋರಿರುವ ಫ್ಲೆಕ್ಸ್ ಗಳಲ್ಲಿ ಸಚಿವ ಎನ್.ಎಸ್. ಬೋಸರಾಜು, ಮಾನ್ವಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಹಂಪಯ್ಯ ಸಾಹುಕಾರ್, ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಮತ್ತು
ಕಾಂಗ್ರೆಸ್ ಮುಖಂಡ ರವಿ ಬೋಸರಾಜು ಸೇರಿ ಅನೇಕ ಕಾಂಗ್ರೆಸ್ ನಾಯಕರ ಫೋಟೋಗಳನ್ನು ಹಾಕಲಾಗಿದೆ.
ಮಾನ್ವಿ ಪಟ್ಟಣ ಹಾಗೂ ರಾಯಚೂರು ಪಟ್ಟಣದಲ್ಲಿ ಗಣೇಶ ವಿಸರ್ಜನೆ ಕಾರ್ಯಕ್ರಮಗಳ ಮುಖ್ಯ ಅತಿಥಿಯಾಗಿ ಬಿಜೆಪಿ ಶಾಸಕ ಹರೀಶ್ ಪೂಂಜ ರಾಯಚೂರು ಜಿಲ್ಲೆಗೆ ಭೇಟಿ ನೀಡಿದ್ದಾರೆ.


