ಮಂಗಳೂರಿನ ಪ್ರಸಿದ್ಧ ಉದ್ಯಮಿಯೊಬ್ಬರನ್ನು ಕಾಂಗ್ರೆಸ್ ಮುಖಂಡನೊಬ್ಬ ಹನಿಟ್ರ್ಯಾಪ್ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಮಂಗಳೂರು ಯುವಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿಝಾಮ್ ಮತ್ತು ಜಿತೇಶ್ ಎಂಬಾತ ಅಶ್ಲೀಲ ವಿಡಿಯೋ ಬಳಸಿ ಉದ್ಯಮಿಯಿಂದ ಕೋಟಿ ಕೋಟಿ ದೋಚಿದ್ದಾರೆ ಎಂದು ಆರೋಪಿಸಲಾಗಿದೆ.
ಉದ್ಯಮಿಯಿಂದ ಬರೋಬ್ಬರಿ 2 ಕೋಟಿ 77 ಲಕ್ಷ ದೋಚಿ ಭಾರೀ ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. 2024ರಲ್ಲೇ ಪ್ರಸಿದ್ಧ ಉದ್ಯಮಿಗೆ ಜಿತೇಶ್ ಹನಿಟ್ರ್ಯಾಪ್ ಖೆಡ್ಡಾ ತೋಡಿದ್ದ ಎನ್ನಲಾಗಿದ್ದು, ಉದ್ಯಮಿ ಜೊತೆಗಿನ ತನ್ನ ಅಶ್ಲೀಲ ಫೋಟೋ, ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿದ್ದಾನೆಯ ಪತ್ನಿಗೆ ವಿಡಿಯೋ ತೋರಿಸೋದಾಗಿ ಬೆದರಿಸಿ 35 ಲಕ್ಷ ಹಣಕ್ಕೆ ಜಿತೇಶ್ ಬೇಡಿಕೆ ಇಟ್ಟಿದ್ದ. ಮರ್ಯಾದೆಗೆ ಹೆದರಿ ಚೆಕ್ ಮೂಲಕ ಜಿತೇಶ್ ಗೆ ಉದ್ಯಮಿ ಹಣ ನೀಡಿದ್ದರು ಎನ್ನಲಾಗಿದೆ. ಮತ್ತೆ ಮತ್ತೆ ಹಣಕ್ಕೆ ಬೇಡಿಕೆ ಇಟ್ಟಾಗ ಯುವ ಕಾಂಗ್ರೆಸ್ ಮುಖಂಡ ನಿಝಾಮ್ ಗೆ ಉದ್ಯಮಿ ಮಾಹಿತಿ ನೀಡಿದ್ದಾರೆ. ಆದರೆ ಕಾಂಗ್ರೆಸ್ ಮುಖಂಡ ನಿಝಾಮ್ ಜಿತೇಶ್ ಜೊತೆ ಸೇರಿ ಉದ್ಯಮಿ ಬ್ಲಾಕ್ ಮೇಲ್ ಗೆ ಇಳಿದಿದ್ದಾನೆ. ನಿಝಾಮ್ ಎಂಟ್ರಿಯಾಗಿ ಉದ್ಯಮಿಯಿಂದ ಮತ್ತೆ ಕೋಟಿ ಕೋಟಿ ಲೂಟಿ ಮಾಡಿದ್ದಾರೆ.

ಜಿತೇಶ್ ಆತ್ಮಹತ್ಯೆ ಕಥೆ ಕಟ್ಟಿ ಉದ್ಯಮಿ ಬಳಿಯಿಂದ ನಿಝಾಮ್ ಕೋಟಿ ಕೋಟಿ ವಸೂಲಿ ಮಾಡಿದ್ದಾನೆ. 2024ರ ಮೇ ತಿಂಗಳಲ್ಲಿ ಜಿತೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ನಿಝಾಮ್ ಹೇಳಿದ್ದ. ಡೆತ್ ನೋಟ್ ನಲ್ಲಿ ಉದ್ಯಮಿ ಹೆಸರು ಬರೆದಿರೋದಾಗಿ ಕಥೆ ಸೃಷ್ಟಿಸಿ ಮತ್ತೆ ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ಜಿತೇಶ್ ನೇಣಿಗೆ ಶರಣಾದ ರೀತಿ ಹಾಗೂ ಅಂತ್ಯಕ್ರಿಯೆಯ ಫೋಟೋ ಹಾಕಿ ಉದ್ಯಮಿಗೆ ನಿಝಾಮ್ ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ಜೀವಂತ ಇದ್ದವನ ಆತ್ಮಹತ್ಯೆ ಕಥೆ ಸೃಷ್ಟಿಸಿ ಕೇಸು ಹಾಕಿಸಿ ಜೈಲಿಗೆ ತಳ್ಳುವ ಬೆದರಿಕೆ ಹಾಕಿದ್ದಾನೆ. ಜೈಲಿಗೆ ಹೋಗೋದನ್ನ ತಪ್ಪಿಸಲು ಕೋಟಿ ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಅದರಂತೆ 2024 ರಿಂದ 2026ರವರೆಗೆ ನಿಝಾಮ್ ಕೋಟ್ಯಾಂತರ ರೂ. ಹಣ ವಸೂಲಿ ಮಾಡಿದ್ದಾನೆ. ಜಿತೇಶ್ ಆತ್ಮಹತ್ಯೆ ಕಥೆ ಹಾಗೂ ಡೆತ್ ನೋಟ್ ಸ್ಟೋರಿ ನಂಬಿದ್ದ ಮಂಗಳೂರಿನ ಉದ್ಯಮಿ ಭಯ ಮತ್ತು ಮರ್ಯಾದೆಯಿಂದ ನಿಝಾಮ್ ಕೇಳಿದಷ್ಟು ದುಡ್ಡು ಕೊಟ್ಟಿದ್ದಾರೆ. ಎರಡು ವರ್ಷಗಳ ಕಾಲ ಉದ್ಯಮಿ 2 ಕೋಟಿ 77 ಲಕ್ಷದಷ್ಟು ಹಣ ನೀಡಿದ್ದಾರೆ. ಆದರೆ 2026ರ ಜೂನ್ ನಲ್ಲಿ ಉದ್ಯಮಿಗೆ ಮಂಗಳೂರಿನಲ್ಲಿ ಜಿತೇಶ್ ಕಾಣಸಿಕ್ಕಿದ್ದಾನೆ.
ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾದ ಜಿತೇಶ್ ಜೀವಂತ ಇರೋದು ನೋಡಿ ಉದ್ಯಮಿಗೆ ಶಾಕ್ ಆಗಿದ್ದು ಹೀಗಾಗಿ ಮಂಗಳೂರಿನ ಉರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಉದ್ಯಮಿ ದೂರಿನ ಆಧಾರದಲ್ಲಿ ಜಿತೇಶ್ ಜಾಗೂ ನಿಝಾಮ್ ನನ್ನು ಪೊಲೀಸರು ಬಂಧಿಸಿದ್ದಾರೆ.ಇನ್ನು ಮಂಗಳೂರು ಹಾಗೂ ರಾಜ್ಯದ ಹಲವು ನಾಯಕರ ಜೊತೆಗಿನ ನಿಝಾಮ್ ಫೋಟೋ ವೈರಲ್ ಆಗಿದೆ.ಸದ್ಯ ಹನಿಟ್ರ್ಯಾಪ್ ಕೇಸ್ ನಲ್ಲಿ ನಿಝಾಮ್ ಮತ್ತು ಜಿತೇಶ್ ಬಂಧಿತರಾಗಿದ್ದಾರೆ.


