ಮಂಗಳೂರು: ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ಬೀಡಿ ನೀಡುವಂತೆ ಒತ್ತಾಯಿಸಿ ವಿಚಾರಣಾ ಬಂಧಿಯೊಬ್ಬ ಅಡುಗೆ ತಯಾರಿಗೆ ಅಡ್ಡಿಪಡಿಸಿ, ಜೈಲು ಸಿಬ್ಬಂದಿಗೆ ಬೆದರಿಕೆ ಹಾಕಿದ ಆರೋಪ ಕೇಳಿಬಂದಿದೆ.
ವಿಚಾರಣಾ ಬಂಧಿ ಫೈಜಲ್ ಎಂಬಾತ ಜೈಲಿನ ಅಡುಗೆ ಮನೆಗೆ ತೆರಳಿ, ಪಾಕಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಬಂಧಿಗಳಿಗೆ ಅಧೀಕ್ಷಕರು ಬೀಡಿ ನೀಡುವವರೆಗೆ ಅಡುಗೆ ತಯಾರಿಸಬಾರದು ಎಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಇದರಿಂದ ಮಧ್ಯಾಹ್ನದ ಊಟದ ತಯಾರಿಗೆ ಅಡಚಣೆ ಉಂಟಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬಳಿಕ ಸಹ ಬಂಧಿಗಳನ್ನು ಒಗ್ಗೂಡಿಸಿಕೊಂಡು ಜೈಲು ಅಧೀಕ್ಷಕರ ಕಚೇರಿಗೆ ತೆರಳಿದ ಫೈಜಲ್, ಬೀಡಿ ನೀಡುವವರೆಗೆ ಅಡುಗೆ ತಯಾರಿಸಲು ಬಿಡುವುದಿಲ್ಲ ಎಂದು ಹೇಳಿದ್ದಾನೆ ಎನ್ನಲಾಗಿದೆ. ಒಂದು ವೇಳೆ ಅಡುಗೆ ತಯಾರಿಸಿದರೆ ಅದರಲ್ಲಿ ಹಲ್ಲಿ ಅಥವಾ ಜಿರಳೆ ಹಾಕಿ ಗಲಾಟೆ ಸೃಷ್ಟಿಸಿ, ಜೈಲು ಅಧಿಕಾರಿಗಳನ್ನು ವರ್ಗಾವಣೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.
ಅಡುಗೆ ಮನೆಯ ಗೇಟ್ ಮುಚ್ಚಿದ ಬಳಿಕ ಅಲ್ಲಿದ್ದ ಸಿಲಿಂಡರ್‌ನಿಂದ ಗೇಟ್ ಹಾಗೂ ಬೀಗದ ಕೀಗೆ ಹೊಡೆದು ಬೀಗ ತೆರೆಯುವಂತೆ ಕೂಗಾಡಿದ್ದಲ್ಲದೆ, ಗ್ಯಾಸ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಇದಲ್ಲದೆ, ಇತರ ಬಂಧಿಗಳನ್ನು ಪ್ರಚೋದಿಸಿ ಬೀಡಿ ನೀಡುವವರೆಗೆ ಕೊಠಡಿಗಳಿಗೆ ತೆರಳದಂತೆ ಒತ್ತಾಯಿಸಿ, ಕಿರುಚಾಡುತ್ತಾ ಜೈಲು ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಜೈಲು ಅಧೀಕ್ಷಕ ಶರಣಬಸಪ್ಪ ಅವರು ಬರ್ಕೆ ಪೊಲೀಸರಿಗೆ ದೂರು ನೀಡಿದ್ದಾರೆ.


