Thursday, September 17, 2026
Homeತಾಜಾ ಸುದ್ದಿಬೆಂಗಳೂರಲ್ಲಿ ರಿಯಲ್ 'ಫಾಸ್ಟ್ & ಫ್ಯೂರಿಯಸ್': ರಾಜಸ್ಥಾನದ ಯುವತಿ ಅಪಹರಣ ಯತ್ನ, 9 KM ಬೆನ್ನಟ್ಟಿ...

ಬೆಂಗಳೂರಲ್ಲಿ ರಿಯಲ್ ‘ಫಾಸ್ಟ್ & ಫ್ಯೂರಿಯಸ್’: ರಾಜಸ್ಥಾನದ ಯುವತಿ ಅಪಹರಣ ಯತ್ನ, 9 KM ಬೆನ್ನಟ್ಟಿ ಕಿಡ್ನಾಪರ್ಸ್‌ಗೆ ಧರ್ಮದೇಟು ಕೊಟ್ಟ ಸ್ಥಳೀಯರು!

- Advertisement -
- Advertisement -

ರಾಜಸ್ಥಾನದಲ್ಲಿ ಪ್ರೇಮ ವಿವಾಹವಾಗಿ ಬೆಂಗಳೂರಿನ ಕೆ.ಪಿ. ಅಗ್ರಹಾರ ದಾಸರಹಳ್ಳಿಯಲ್ಲಿ ವಾಸವಿದ್ದ ನವಜೋಡಿಯನ್ನು ಹುಡುಕಿಕೊಂಡು ಬಂದ ಸುಪಾರಿ ಗ್ಯಾಂಗ್, ಸಿನಿಮೀಯ ರೀತಿಯಲ್ಲಿ ಯುವತಿಯನ್ನು ಅಪಹರಿಸಲು ಯತ್ನಿಸಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದೆ.

ರಾಜಸ್ಥಾನದ ಮೇಲ್ವಾಸ್‌ ಗ್ರಾಮದ ಪೂಜಾ 21 ಮತ್ತು ಓಂಪ್ರಕಾಶ್ 9 ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಪೋಷಕರ ವಿರೋಧವಿದ್ದ ಕಾರಣ ರಾಜಸ್ಥಾನ ತೊರೆದು ಬೆಂಗಳೂರಿನಲ್ಲಿ ವಾಸವಾಗಿದ್ದರು. ಆದರೆ ಪೂಜಾ ಸೋದರತ್ತೆಯೊಂದಿಗೆ ಸಂಪರ್ಕದಲ್ಲಿದ್ದು, ಆಕೆಯಿಂದ ವಿಳಾಸ ಪಡೆದ ಅತ್ತೆ ಯುವತಿಯನ್ನು ಅಪಹರಿಸಿ ತರಲು ಸುಪಾರಿ ಗ್ಯಾಂಗ್ ಕಳುಹಿಸಿದ್ದಳು.

ಬುಧವಾರ ರಾತ್ರಿ ಮನೆಗೆ ನುಗ್ಗಿದ ಗ್ಯಾಂಗ್, ಓಂಪ್ರಕಾಶ್ ಮೇಲೆ ಹಲ್ಲೆ ನಡೆಸಿ ಪೂಜಾಳನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ಯಲು ಯತ್ನಿಸಿದೆ. ಯುವತಿಯ ಚೀರಾಟ ಕೇಳಿ ಸ್ಥಳೀಯರು ಕಾರನ್ನು ಹಿಂಬಾಲಿಸಿದಾಗ, ಚಾಲಕ ಸದ್ದಾಂ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ ನ್ಯಾಯಾಧೀಶರ ಕಾರು, ಪೊಲೀಸ್ ವಾಹನ ಸೇರಿದಂತೆ 35ಕ್ಕೂ ಹೆಚ್ಚು ಕಾರುಗಳು ಹಾಗೂ 100ಕ್ಕೂ ಹೆಚ್ಚು ಬೈಕ್‌ಗಳಿಗೆ ಡಿಕ್ಕಿ ಹೊಡೆದಿದ್ದಾನೆ.

ಈ ಭೀಕರ ಸರಣಿ ಅಪಘಾತದಲ್ಲಿ 12 ವರ್ಷದ ಪೃಥ್ವಿರಾಜ್, 9 ವರ್ಷದ ಯಶಿಕಾ, 35 ವರ್ಷದ ಅಮೂಲ್, 64 ವರ್ಷದ ಮಣಿ, 33 ವರ್ಷದ ಸಂತೋಷ್ ಹಾಗೂ 57 ವರ್ಷದ ಜಯಲಕ್ಷ್ಮಿ ಸೇರಿದಂತೆ 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ತಲೆಗೆ ಗಂಭೀರ ಪೆಟ್ಟು ಬಿದ್ದಿರುವ ಜಯಲಕ್ಷ್ಮಿ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದಂತೆ 30ಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಸುಮಾರು 9 ಕಿಲೋಮೀಟರ್ ಬೆನ್ನಟ್ಟಿದ ಸಾರ್ವಜನಿಕರು ವಿಜಯನಗರದ ಹೊಸಹಳ್ಳಿ ಬಳಿ ಕಾರನ್ನು ಅಡ್ಡಗಟ್ಟಿ, ಕಲ್ಲು ತೂರಿ ಕಾರಿನಲ್ಲಿದ್ದ ಪೂಜಾಳನ್ನು ರಕ್ಷಿಸಿದ್ದಾರೆ. ಕಾರು ಚಾಲಕ ಸದ್ದಾಂ ಸ್ಥಳದಿಂದ ಕಾಲ್ಕಿತ್ತಿದ್ದು, ಸ್ಥಳೀಯರ ಕೈಗೆ ಸಿಕ್ಕಿಬಿದ್ದ ರಾಕೇಶ್, ಕರಣ್ ಹಾಗೂ ಆಯಾನ್ ಎಂಬ ಮೂವರು ಕಿಡ್ನಾಪರ್‌ಗಳನ್ನು ಹಿಗ್ಗಾಮುಗ್ಗ ಥಳಿಸಿ ಮಾಗಡಿ ರೋಡ್ ಪೊಲೀಸರಿಗೆ ಒಪ್ಪಿಸಲಾಗಿದೆ.

- Advertisement -

Latest News

error: Content is protected !!