ಬೆಳ್ತಂಗಡಿ: ಮಂಗಳೂರು ಸೇರಿದಂತೆ ಕರಾವಳಿ ಕರ್ನಾಟಕ ಪ್ರದೇಶ ಹಾಗೂ ಮೈಸೂರು, ಕೊಡಗು, ಹಾಸನ, ದಾವಣಗೆರೆ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕರ್ನಾಟಕ ಹೈಕೋರ್ಟ್ನ ಸರ್ಕ್ಯೂಟ್ ಬೆಂಚ್ ಅಥವಾ ಶಾಶ್ವತ ಪೀಠ ಸ್ಥಾಪಿಸುವ ಸಾಧ್ಯತೆಗಳನ್ನು ಪರಿಶೀಲಿಸಲು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಉನ್ನತ ಮಟ್ಟದ ಸಮಿತಿ ರಚಿಸಿರುವುದನ್ನು ಬೆಳ್ತಂಗಡಿ ವಕೀಲರ ಸಂಘ ಹಾರ್ದಿಕವಾಗಿ ಸ್ವಾಗತಿಸಿದೆ.
ಸೆಪ್ಟೆಂಬರ್ 29ರ ಹೈಕೋರ್ಟ್ ಅಧಿಸೂಚನೆಯಂತೆ, ನ್ಯಾಯಮೂರ್ತಿ ಅನು ಶಿವರಾಮನ್, ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಹಾಗೂ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರನ್ನೊಳಗೊಂಡ ತ್ರಿಸದಸ್ಯ ಸಮಿತಿಯನ್ನು ನೇಮಿಸಲಾಗಿದೆ. ಈ ಸಮಿತಿಯು ಎಲ್ಲಾ ಪಾಲುದಾರರ ಅಭಿಪ್ರಾಯಗಳನ್ನು ಸಂಗ್ರಹಿಸಿ ಹೈಕೋರ್ಟ್ಗೆ ಸಮಗ್ರ ವರದಿ ಸಲ್ಲಿಸಲಿದೆ.
ಕರಾವಳಿ ಭಾಗದ ಸಾರ್ವಜನಿಕರು ಹಾಗೂ ವಕೀಲರು ನ್ಯಾಯಾಂಗ ಸೇವೆಗಾಗಿ ದೂರದ ಬೆಂಗಳೂರಿಗೆ ಅಲೆಯಬೇಕಾದ ಸ್ಥಿತಿಯಿದೆ. ಮಂಗಳೂರಿನಲ್ಲಿ ಪೀಠ ಸ್ಥಾಪನೆಯಾದರೆ ದಕ್ಷಿಣ ಕನ್ನಡ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ಜನರಿಗೆ ಸಮಯ ಮತ್ತು ಹಣದ ಅಭಾವ ಕಡಿಮೆಯಾಗಿ ಸುಲಭವಾಗಿ ನ್ಯಾಯ ದೊರೆಯಲಿದೆ.
ಹೈಕೋರ್ಟ್ನ ಈ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ಅಲೋಸಿಯಸ್ ಎಸ್. ಲೋಬೊ, “ಕರಾವಳಿಯಲ್ಲಿ ಪೀಠ ಸ್ಥಾಪನೆಯ ಬೇಡಿಕೆ ಹಲವು ವರ್ಷಗಳಿಂದಿತ್ತು. ಈ ಹಿಂದೆ ಬೆಳ್ತಂಗಡಿ ವಕೀಲರ ಭವನದಲ್ಲಿ ಸಾರ್ವಜನಿಕರು ಹಾಗೂ ಶಿಕ್ಷಣ ಸಂಸ್ಥೆಗಳ ಪ್ರಮುಖರನ್ನು ಒಟ್ಟುಗೂಡಿಸಿ ಜಾಗೃತಿ ಮೂಡಿಸಲಾಗಿತ್ತು. ಇದೀಗ ಅಧಿಕೃತ ಪರಿಶೀಲನಾ ಸಮಿತಿ ರಚನೆಯಾಗಿರುವುದು ಅತ್ಯಂತ ಮಹತ್ವದ ಬೆಳವಣಿಗೆ” ಎಂದು ತಿಳಿಸಿದರು.
ಸಮಿತಿಗೆ ಕರಾವಳಿ ಭಾಗದ ನ್ಯಾಯಾಂಗ ಅಗತ್ಯತೆಗಳು, ಮೂಲಸೌಕರ್ಯ ಹಾಗೂ ಸಾರ್ವಜನಿಕ ಅನುಕೂಲಗಳ ಕುರಿತು ಸಮಗ್ರ ಮಾಹಿತಿ ಮತ್ತು ಸಹಕಾರ ನೀಡಲು ವಕೀಲರ ಸಂಘ ನಿರ್ಧರಿಸಿದೆ.


