
ಕರಾವಳಿಯಲ್ಲಿ ಒಂದರ ಹಿಂದೊಂದರಂತೆ ಹತ್ಯೆಗಳು ನಡೆಯುತ್ತಲೇ ಇವೆ. ಹಾಗೇ ರಾಜಕೀಯ ಪಕ್ಷಗಳ ಕೆಸರೆರಚಾಟವೂ ನಡೆಯುತ್ತಲೇ ಇದೆ. ಸಿಎಂ ಬಸವರಾಜು ಬೊಮ್ಮಾಯಿ ಹತ್ಯೆಗೊಳಗಾದ ಪ್ರವೀಣ್ ನೆಟ್ಟಾರು ಮನೆಗೆ ಹೋಗಿಬಂದದ್ದೂ ಈಗ ವಿವಾದದ ಎಬ್ಬಿಸಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಿಎಂ ಕುಮಾರಸ್ವಾಮಿ, ಮಂಗಳೂರಿನಲ್ಲಿ ಕಳೆದ 10 ದಿನಗಳಲ್ಲಿ ಮೂರು ಬರ್ಬರ ಹತ್ಯೆಗಳಾಗಿವೆ. ಆದರೆ ಒಂದು ವರ್ಗದವರ ಮನೆಗೆ ಮಾತ್ರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡುವ ಮೂಲಕ ಇಡೀ ನಾಡಿನ ಮುಖ್ಯಮಂತ್ರಿ ಎಂಬುದನ್ನು ಅವರು ಮರೆತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
ಕಲಬುರಗಿ ನಗರದಲ್ಲಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಶನಿವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಕೋಮು ಗಲಭೆ ಹೆಚ್ಚಾಗಿದೆ. ಕಳೆದ ನಾಲ್ಕು ತಿಂಗಳಲ್ಲಿ ಇದು ಅತೀ ಎನಿಸುವಷ್ಟು ಹೆಚ್ಚಾಗಿರುವುದರಿಂದ ದುರದೃಷ್ಟಕರ. ಒಂದೇ ಜಿಲ್ಲೆಯಲ್ಲಿ 10 ದಿನಗಳಲ್ಲಿ ಬರ್ಬರವಾಗಿ ಹತ್ಯೆಯಾದ ಒಬ್ಬರಿಗೆ 50 ಲಕ್ಷ ರೂ. ಪರಿಹಾರ ಘೋಷಣೆ ಮಾಡುತ್ತಿರಿ, ಇನ್ನುಳಿದವರಿಗೆ ಯಾವುದೇ ರೀತಿ ಸಹಾಯವಿಲ್ಲ. ಇದು ಯಾವ ರೀತಿಯ ಸಾಮಾಜಿಕ ನ್ಯಾಯವನ್ನು ಬಿಜೆಪಿ ಸರಕಾರ ಸಾರಲು ಹೊರಟಿದೆ ಎಂದು ಪ್ರಶ್ನೆ ಮಾಡಿದರು.


