Monday, May 13, 2024
Homeಕರಾವಳಿಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ: ತ್ವರಿತ ವಿತರಣೆಗೆ ಮುಖ್ಯಮಂತ್ರಿ ಸೂಚನೆ

ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ: ತ್ವರಿತ ವಿತರಣೆಗೆ ಮುಖ್ಯಮಂತ್ರಿ ಸೂಚನೆ

spot_img
- Advertisement -
- Advertisement -

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೀನುಗಾರಿಕೆ ಹಾಗೂ ಪಶುಸಂಗೋಪನೆಯನ್ನು ಕೃಷಿಗೆ ಪೂರಕ ಚಟುವಟಿಕೆಗಳೆಂದು ಗುರುತಿಸಿ, ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯವನ್ನು ಅವರಿಗೂ ವಿಸ್ತರಿಸಿದ್ದಾರೆ. ರಾಜ್ಯದಲ್ಲಿ ಮೀನುಗಾರರಿಗೆ ಆದ್ಯತೆಯ ಮೇರೆಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯವನ್ನು ಒದಗಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬೆಂಗಳೂರಿನಲ್ಲಿ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ರಾಜ್ಯಮಟ್ಟದ ಬ್ಯಾಂಕರುಗಳ ಸಭೆ ನಡೆಸಿ ಈ ಕುರಿತು ಸಿಎಂ ಬೊಮ್ಮಾಯಿ ಚರ್ಚಿಸಿದ್ದಾರೆ.

ಮೊದಲ ಹಂತದಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡುಗಳನ್ನು ತ್ವರಿತವಾಗಿ ಒದಗಿಸುವಂತೆ ಸಿಎಂ ಸೂಚಿಸಿದ್ದಾರೆ.

ಮೀನುಗಾರಿಕಾ ಇಲಾಖೆಯು ತಮ್ಮ ಬಳಿ ಇರುವ ಮೀನುಗಾರರ ಮಾಹಿತಿಯನ್ನು ಬ್ಯಾಂಕರುಗಳಿಗೆ ಒದಗಿಸಿ, ಅಭಿಯಾನದ ಮಾದರಿಯಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಿಸುವಂತೆ ಸಿಎಂ ಸೂಚಿಸಿದರು.

ಮೀನುಗಾರರ ಆದಾಯ ಹೆಚ್ಚಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮತ್ಸ್ಯ ಸಂಪದ ಮತ್ತು ಇತರ ಯೋಜನೆಗಳಲ್ಲಿ ಮೀನುಗಾರರಿಗೆ ವಿವಿಧ ಸವಲತ್ತುಗಳನ್ನು ವಿತರಿಸಲಾಗುತ್ತಿದೆ. ಮೀನುಗಾರರ ರೈತ ಉತ್ಪಾದಕರ ಸಂಘ ಸ್ಥಾಪನೆ ಮಾಡಿ ನೆರವು ನೀಡಲಾಗುತ್ತಿದೆ. ಮೀನುಗಾರ ಮಹಿಳೆಯರ ಸ್ವಸಹಾಯ ಗುಂಪುಗಳನ್ನು ರಚಿಸಿ ಆದಾಯ ಉತ್ಪನ್ನ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ನೆರವು ನೀಡಲಾಗುವುದು. ಕಿಸಾನ್ ಕ್ರೆಡಿಟ್ ಕಾರ್ಡ್ ಈ ಸೌಲಭ್ಯಗಳ ವಿತರಣೆ ಸಂದರ್ಭದಲ್ಲಿ ಮಹತ್ತರ ಪಾತ್ರ ವಹಿಸಲಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದ್ದಾರೆ.

ಮೀನುಗಾರರ ಸಹಕಾರ ಬ್ಯಾಂಕ್ ಗಳ ಮೂಲಕವೂ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡುವಂತೆ ಮುಖ್ಯಮಂತ್ರಿಗಳು ನಿರ್ದೇಶನ ನೀಡಿದ್ದಾರೆ.

ಆಳ ಸಮುದ್ರ ಮೀನುಗಾರಿಕೆ
ಆಳ ಸಮುದ್ರ ಮೀನುಗಾರಿಕೆ ಬೋಟ್ ಗಳ ಖರೀದಿಗೆ ನೆರವು ನೀಡುವ ಯೋಜನೆಗೆ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದ್ದು, ಈಗಾಗಲೇ 185 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.

ಕೇಂದ್ರ ಸರ್ಕಾರದ ಮತ್ಸ್ಯ ಸಂಪದ ಯೋಜನೆಯೊಂದಿಗೆ ಸಂಯೋಜಿಸಿ, ಜಾರಿಗೊಳಿಸಲಾಗುತ್ತಿರುವ ಈ ಯೋಜನೆಗೆ ಕೇಂದ್ರದ ಅನುಮೋದನೆಯನ್ನು ತ್ವರಿತವಾಗಿ ಪಡೆಯುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

ಸಭೆಯಲ್ಲಿ ಮೀನುಗಾರಿಕೆ ಮತ್ತು ಬಂದರು ಸಚಿವ ಎಸ್. ಅಂಗಾರ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಮೀನುಗಾರಿಕಾ ಇಲಾಖೆ ಕಾರ್ಯದರ್ಶಿ ಸಲ್ಮಾ ಫಾಹಿಮ್, ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿಯ ಸಂಚಾಲಕ ಮುರಳಿಕೃಷ್ಣ ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

- Advertisement -
spot_img

Latest News

error: Content is protected !!