Friday, May 3, 2024
Homeಅಪರಾಧವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ವಂಚನೆ ಮಂಗಳೂರಿನಲ್ಲಿ, ವ್ಯಕ್ತಿಯ ಬಂಧನ

ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ವಂಚನೆ ಮಂಗಳೂರಿನಲ್ಲಿ, ವ್ಯಕ್ತಿಯ ಬಂಧನ

spot_img
- Advertisement -
- Advertisement -

ಮಂಗಳೂರು: ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಅಲ್ಲದೇ ಅದಕ್ಕೆ ಸಂಬಂಧಪಟ್ಟ ವೀಸಾವನ್ನು ಮಾಡಿಕೊಡುವುದಾಗಿ ಹೇಳಿ ಲಕ್ಷಾಂತರ ರೂ. ವಂಚಿಸಿದ ಆರೋಪದಲ್ಲಿ ವ್ಯಕ್ತಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಬಲ್ಮಠ ನಿವಾಸಿ ಜೆರಿ ಇಥಿಯಲ್ ಸಿಖಾ (32) ಬಂಧಿತ ಆರೋಪಿ.ಕಾವೂರಿನ ಮಹಿಳೆಯೊಬ್ಬರು ವಿದೇಶದಲ್ಲಿ ಉದ್ಯೋಗಕ್ಕೆ ತೆರಳಲು ಉದ್ದೇಶಿಸಿ ಎಪ್ರಿಲ್ ತಿಂಗಳ ಆರಂಭದಲ್ಲಿ ನಗರದ ಜೆರಿ ಇಥಿಯಲ್ ಸಿಖಾನ ಕಚೇರಿಗೆ ತೆರಳಿದ್ದರು. ಉದ್ಯೋಗದ ಬಗ್ಗೆ ವಿಚಾರಿಸಿದಾಗ, ಯುರೋಪ್‌ನಲ್ಲಿ ಕಚೇರಿ ಕೆಲಸಕ್ಕೆ ಬೇಕಾಗಿದ್ದಾರೆ. ತಿಂಗಳಿಗೆ 3.5 ಲಕ್ಷ ರೂ. ವೇತನ ಸಿಗಲಿದೆ. ಜೊತೆಗೆ ವೀಸಾ ಕೂಡ ಕೊಡಲಾಗುವುದು. ಇದಕ್ಕೆ ಒಟ್ಟು 5.5 ಲಕ್ಷ ರೂ. ವೆಚ್ಚ ತಗುಲುವುದಾಗಿ ಆರೋಪಿಯು ಮಹಿಳೆಗೆ ವಿವರ ನೀಡಿದ್ದ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.

ಉದ್ಯೋಗ ಲಭಿಸುವ ಭರವಸೆಯಲ್ಲಿ ಮಹಿಳೆಯು ಚಿನ್ನಾಭರಣ ಅಡವಿಟ್ಟು ಒಂದು ಲಕ್ಷ ರೂ. ನಗದನ್ನು ನೇರವಾಗಿ ಹಾಗೂ ಒಂದು ಲಕ್ಷ ರೂ.ನ್ನು ನೆಫ್ಟ್ ಮೂಲಕ ಆರೋಪಿಯ ಕಚೇರಿಯ ಬ್ಯಾಂಕ್ ಖಾತೆಗೆ ಪಾವತಿಸಿದ್ದರು. ನಂತರ ಆರೋಪಿಯು ಸಂಬಂಧಪಟ್ಟ ಪ್ರಾಧಿಕಾರದಿಂದ ಪರವಾನಿಗೆ ಪಡೆಯದಿರುವುದು ಮಹಿಳೆಯ ಗಮನಕ್ಕೆ ಬಂದಿದೆ. ಈ ವೇಳೆ ಹಣ ವಾಪಸ್ ಮಾಡಲು ಕೇಳಿದಾಗ ವಂಚಿಸಿರುವುದಾಗಿ ಮಹಿಳೆ ದೂರು ನೀಡಿದ್ದರು ಎಂದು ಕಮಿಷನರ್ ಮಾಹಿತಿ ನೀಡಿದರು.

ಮಂಗಳೂರು ಉತ್ತರ (ಬಂದರು) ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯೋರ್ವನನ್ನು ಬಂಧಿಸಲಾಗಿದೆ. ತನಿಖೆ ನಡೆಯುತ್ತಿದೆ. ಬಂಧಿತ ಆರೋಪಿಯಿಂದಲೇ ವಂಚನೆಗೊಳಗಾದ ಮತ್ತಿಬ್ಬರು ಸಂತ್ರಸ್ತರು ದೂರು ನೀಡಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಮಾಹಿತಿಗೆ ಮನವಿ: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈಗಾಗಲೇ ವಿದೇಶಾಂಗ ವ್ಯವಹಾರ ಸಚಿವಾಲಯದ ಅಂಗಸಂಸ್ಥೆ ವಲಸಿಗರ ರಕ್ಷಕ ಸಂಸ್ಥೆಯಿಂದ ((Protector of Emigrants-POE) ವಿದೇಶಿ ಉದ್ಯೋಗ ನೇಮಕಾತಿ ಏಜೆನ್ಸಿಗಳ ಅಧಿಕೃತ ಪಟ್ಟಿ ಬಿಡುಗಡೆಗೊಳಿಸಿತ್ತು. ಯಥಾವತ್ ಪ್ರತಿಯನ್ನು ಈಗಾಗಲೇ ಪ್ರಕಟಿಸಲಾಗಿದೆ. ವಿದೇಶಿ ಉದ್ಯೋಗದ ಆಮಿಷ ನೀಡಿ ವಂಚನೆ ಆಗಿದ್ದರೆ, ಅಂಥವರು ನೇರವಾಗಿ ಪೊಲೀಸರಿಗೆ ದೂರು ನೀಡಬಹುದಾಗಿದೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

- Advertisement -
spot_img

Latest News

error: Content is protected !!