ಕಾರವಾರ: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಹಣ ಪಡೆದು ವಂಚಿಸುತ್ತಿದ್ದ ವ್ಯವಸ್ಥಿತ ಜಾಲವೊಂದನ್ನು ಭೇದಿಸುವಲ್ಲಿ ಕಾರವಾರದ ಸೈಬರ್, ಹಣಕಾಸು ಮತ್ತು ಮಾದಕವಸ್ತು (ಸಿ.ಇ.ಎನ್) ಪೊಲೀಸರು ಯಶಸ್ವಿಯಾಗಿದ್ದಾರೆ. ನಾಲ್ವರು ಆರೋಪಿಗಳನ್ನು ಬೆಂಗಳೂರಿನಲ್ಲಿ ಕಾರವಾರ ಪೊಲೀಸರು ಬಂಧಿಸಿದ್ದಾರೆ.
ಕೋಲಾರ ಜಿಲ್ಲೆ ಬಂಗಾರಪೇಟೆಯ ದಾಸರಹೊಸಳ್ಳಿ ನಿವಾಸಿ ಎಂ.ಎನ್.ಅಶೋಕ್ (26), ಅಸ್ಸಾಂನ ಬುಲಿಯಂಗರ್ ಹಲಾಂ (25), ತ್ರಿಪುರಾದ ದರ್ತಿನ್ ಬಿರ್ ಹಲಾಂ (28) ಹಾಗೂ ಮಣಿಪುರದ ವಾರಿಂಗಂ ಫುಂಗ್‌ಶೊಕ್ (30) ಬಂಧಿತ ಆರೋಪಿಗಳಾಗಿದ್ದಾರೆ. ಇವರೆಲ್ಲರೂ ಬೆಂಗಳೂರಿನ ಮಾರತ್ತಹಳ್ಳಿಯ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು.
ಹೊನ್ನಾವರ ತಾಲ್ಲೂಕಿನ ಗುಣವಂತೆಯ ನೇತ್ರಾವತಿ ಗೌಡ ಎಂಬುವವರು ಅಮೆರಿಕದಲ್ಲಿ ಉದ್ಯೋಗ ಪಡೆಯಲು ಬಯಸಿದ್ದರು. ಅದರಂತೆ ಕೆಲಸದ ಹುಡುಕಾಟದಲ್ಲಿದ್ದ ಅವರ ಇ-ಮೇಲ್ ವಿಳಾಸಕ್ಕೆ ಬಂದಿದ್ದ ವಂಚಕರ ಮೇಲ್ ಒಂದನ್ನು ನಂಬಿದ ಅವರು ಹಂತಹಂತವಾಗಿ 57.14 ಲಕ್ಷವನ್ನು ವರ್ಗಾವಣೆ ಮಾಡಿದ್ದರು. ಆದರೆ, ನೇಮಕಾತಿ ಪತ್ರ ಬಾರದ ಕಾರಣ ಅನುಮಾನಗೊಂಡು ಕಾರವಾರದ ಸಿ.ಇ.ಎನ್ ಪೊಲೀಸ್ ಠಾಣೆಗೆ ಫೆ.10ರಂದು ದೂರು ನೀಡಿದ್ದರು.
ಪ್ರಕರಣದ ತನಿಖೆಗೆ ಸಿ.ಇ.ಎನ್ ಇನ್‌ಸ್ಪೆಕ್ಟರ್ ಪಿ.ಸೀತಾರಾಮ ನೇತೃತ್ವದ ತಂಡ ರಚಿಸಲಾಗಿತ್ತು. ನೇತ್ರಾವತಿಗೆ ವಂಚಕರು ಕಳುಹಿಸಿದ್ದ 17 ವಿವಿಧ ಬ್ಯಾಂಕ್ ಶಾಖೆಗಳ ಮಾಹಿತಿ ಮತ್ತು ಅವರು ಕರೆ ಮಾಡಿದ್ದ ಮೊಬೈಲ್ ದೂರವಾಣಿಯ ಸಂಖ್ಯೆಗಳನ್ನು ಆಧರಿಸಿ ಪೊಲೀಸರು ಕಾರ್ಯಾಚರಣೆ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.