Thursday, July 30, 2026
Homeಕರಾವಳಿಉಡುಪಿರಾಹುಲ್ ಗಾಂಧಿ ಕುರಿತು ಆಕ್ಷೇಪಾರ್ಹ ಹೇಳಿಕೆ: ಎಫ್‌ಐಆರ್ ಎದುರಿಸಲು ಸಿದ್ಧ ಎಂದ ಉಡುಪಿ ಶಾಸಕ ಯಶ್‌ಪಾಲ್...

ರಾಹುಲ್ ಗಾಂಧಿ ಕುರಿತು ಆಕ್ಷೇಪಾರ್ಹ ಹೇಳಿಕೆ: ಎಫ್‌ಐಆರ್ ಎದುರಿಸಲು ಸಿದ್ಧ ಎಂದ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ

- Advertisement -
- Advertisement -

ಬೆಂಗಳೂರು: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ನೀಡಿದ್ದ ಆಕ್ಷೇಪಾರ್ಹ ಹೇಳಿಕೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿರುವ ವಿಚಾರವಾಗಿ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿರುವ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ‘ನಮಗೆ ಪ್ರಕರಣಗಳು ಹೊಸದೇನಲ್ಲ, ಇಂತಹ ಕೇಸ್‌ಗಳನ್ನು ನಾವು ಧೈರ್ಯವಾಗಿ ಎದುರಿಸುತ್ತೇವೆ’ ಎಂದು ಆಕ್ರೋಶ ಹೊರಹಾಕಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಉಡುಪಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ನಾನು ರಾಹುಲ್ ಗಾಂಧಿ ಬಗ್ಗೆ ಮಾತನಾಡಿರುವುದು ನಿಜ. ಅವರು ಹತ್ತು ತಿಂಗಳು ವಿದೇಶದಲ್ಲೇ ಇರುತ್ತಾರೆ ಮತ್ತು ವಿಪಕ್ಷ ನಾಯಕನ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುತ್ತಿಲ್ಲ. ರಾಹುಲ್ ಗಾಂಧಿ ನಶೆಯಲ್ಲಿದ್ದಾರೆ, ಅವರು ಇದೇ ರೀತಿ ತಮ್ಮ ಕೆಲಸ ಮುಂದುವರಿಸಿದರೆ ಸರಿಯಾಗಿ ಉತ್ತರ ನೀಡಬೇಕಾಗುತ್ತದೆ ಎಂದು ಹೇಳಿದ್ದೆ. ಇತ್ತೀಚೆಗಷ್ಟೇ ಸಿ.ಟಿ. ರವಿ ಅವರ ಮೇಲೆಯೂ ಪ್ರಕರಣ ದಾಖಲಿಸಿದ್ದಾರೆ. ನಮಗೆ ಇಂತಹ ಕೇಸ್‌ಗಳು ಹೊಸದೇನಲ್ಲ,” ಎಂದರು.

ಇದೇ ವೇಳೆ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ ಶಾಸಕರು, “ಇತ್ತೀಚೆಗೆ ಬಿಎಲ್‌ಒ (BLO) ಮೇಲೆ ಹಲ್ಲೆಯಾದಾಗ ಹಾಗೂ ಶಿವಾಜಿನಗರದಲ್ಲಿ ಅಧಿಕಾರಿಗಳ ಮೇಲೆ ದಾಳಿಯಾದಾಗ ಕಾಂಗ್ರೆಸ್‌ನವರು ಕಣ್ಣುಮುಚ್ಚಿ ಕುಳಿತಿದ್ದರು. ಸರ್ಕಾರ ಬಂಧನಗಳ ಮೂಲಕ ನಮಗೆ ಉತ್ತರ ನೀಡುವುದಲ್ಲ, ಬದಲಾಗಿ ಅಭಿವೃದ್ಧಿಯ ಮೂಲಕ ಉತ್ತರ ನೀಡಬೇಕು. ಅದಕ್ಕೂ ಮೊದಲು ಶಾಸಕರಿಗೆ ನೀಡಬೇಕಾದ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಲಿ,” ಎಂದು ಆಗ್ರಹಿಸಿದರು.

- Advertisement -

Latest News

error: Content is protected !!