Saturday, May 18, 2024
Homeಪ್ರಮುಖ-ಸುದ್ದಿಆಗಸ್ಟ್ 2ನೇ ವಾರದಲ್ಲಿ ಸಂಪುಟ ಪುನರಚನೆ ಮತ್ತು ವಿಸ್ತರಣೆ ಸಾಧ್ಯತೆ

ಆಗಸ್ಟ್ 2ನೇ ವಾರದಲ್ಲಿ ಸಂಪುಟ ಪುನರಚನೆ ಮತ್ತು ವಿಸ್ತರಣೆ ಸಾಧ್ಯತೆ

spot_img
- Advertisement -
- Advertisement -

ಬೆಂಗಳೂರು : ಮತ್ತೆ ಸಂಪುಟ ಪುನರಚನೆ ಮತ್ತು ವಿಸ್ತರಣೆ ಜೋರಾಗಿ ಮಾರ್ದನಿಸೋದಕ್ಕೆ ಶುರುವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಇದೀಗ ಏಕಕಾಲದಲ್ಲಿ ಸಂಪುಟ ವಿಸ್ತರಣೆ ಹಾಗೂ ಪುನರಚನೆಗೂ ಕೈ ಹಾಕಲಿದ್ದಾರೆ ಎಂಬ ಮಾಹಿತಿಗಳು ಕೇಳಿ ಬರುತ್ತಿವೆ. ಎಲ್ಲಾ ಅಂದುಕೊಂಡಂತೆ ಆದರೆ, ಆಗಸ್ಟ್ ತಿಂಗಳ 2ನೇ ವಾರದಲ್ಲಿ ಪುನರಚನೆ ಮತ್ತು ವಿಸ್ತರಣೆ ಒಂದೇ ಹಂತದಲ್ಲಿ ನಡೆಯಲಿದ್ದು, ಹೈಕಮಾಂಡ್ ಹಸಿರು ನಿಶಾನೆಗಾಗಿ ಕಾಯಲಾಗುತ್ತಿದೆ.

ಒಂದು ವೇಳೆ ವರಿಷ್ಠರು ಅನುಮತಿ ಕೊಟ್ಟರೆ ಆ.15ರೊಳಗೆ ಪುನರಚನೆ ಹಾಗೂ ವಿಸ್ತರಣೆಯಾಗುವ ಸಾಧ್ಯತೆ ಇದ್ದು, ಈ ಬಾರಿ ಸಂಪುಟದಿಂದ ಕೆಲವು ಸಚಿವರು ಕೋಕ್ ಪಡೆಯಲಿದ್ದು, ಬಿಜೆಪಿ ಸರ್ಕಾರ ರಚನೆಗೆ ಮಂತ್ರಿ ಹಾಗೂ ಶಾಸಕ ಸ್ಥಾನವನ್ನು ತ್ಯಾಗ ಮಾಡಿದ್ದವರಿಗೆ ಸಚಿವ ಸ್ಥಾನ ಸೌಭಾಗ್ಯ ಸಿಗುವುದು ಖಚಿತವಾಗಿದೆ. ಇದರಲ್ಲಿ ಮುಖ್ಯವಾಗಿ ಇತ್ತೀಚೆಗೆ ವಿಧಾನಸಭೆಯಿಂದ ವಿಧಾನಪರಿಷತ್‍ಗೆ ಆಯ್ಕೆಯಾದ ಎಂಟಿಬಿ ನಾಗರಾಜ್ ಹಾಗೂ ಆರ್.ಶಂಕರ್ ಸಂಪುಟಕ್ಕೆ ಸೇರ್ಪಡೆಯಾಗುವ ಮೊದಲ ಪಟ್ಟಿಯಲ್ಲಿದ್ದಾರೆ.

ಸಮ್ಮಿಶ್ರ ಸರ್ಕಾರದಲ್ಲಿ ಈ ಇಬ್ಬರು ಮಂತ್ರಿ ಹಾಗೂ ಶಾಸಕ ಸ್ಥಾನವನ್ನೇ ಧಾರೆ ಎರೆದಿದ್ದರು. ಹೀಗಾಗಿ ಸಿಎಂ ಈ ಇಬ್ಬರಿಗೂ ಸಚಿವ ಸ್ಥಾನ ನೀಡುವುದಕ್ಕೆ ಸಮ್ಮತಿಸಿದ್ದಾರೆ. ಪಕ್ಷದಲ್ಲೂ ಇದಕ್ಕೆ ಯಾವುದೇ ರೀತಿಯ ಅಪಸ್ವರ ಕೇಳಿಬಂದಿಲ್ಲ.

ಇನ್ನು ನಿನ್ನೆಯಷ್ಟೇ ಪರಿಷತ್‍ಗೆ ನಾಮಕರಣಗೊಂಡ ಮಾಜಿ ಸಚಿವರಾದ ಎಚ್.ವಿಶ್ವನಾಥ್, ಸಿ.ಪಿ.ಯೋಗೇಶ್ವರ್ ಕೂಡ ಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಆದರೆ ಈ ಇಬ್ಬರಿಗೂ ಸದ್ಯದ ಪರಿಸ್ಥಿತಿಯಲ್ಲಿ ಸಂಪುಟಕ್ಕೆ ಸೇರ್ಪಡೆಯಾಗುವ ಸಾಧ್ಯತೆಗಳು ಕ್ಷೀಣಿಸಿವೆ ಎನ್ನಲಾಗುತ್ತಿದೆ. ಏಕೆಂದರೆ ಸರ್ಕಾರದ ಅವಧಿ ಒಂದು ವರ್ಷ ಇರುವ ಹಂತದಲ್ಲಿ ಸಂಪುಟಕ್ಕೆ ತೆಗೆದುಕೊಳ್ಳುವ ನಿರೀಕ್ಷೆ ಇದೆ.

ಸಂಪುಟದಲ್ಲಿ ಸದ್ಯ ಐದು ಸ್ಥಾನಗಳು ಖಾಲಿ ಇವೆ. ಆದರೆ ಆಕಾಂಕ್ಷಿಗಳ ಪಟ್ಟಿ ಮಾತ್ರ ಎರಡು ಡಜನ್‍ಗೂ ಅಧಿಕ ಇದೆ. ಸರ್ಕಾರ ರಚನೆಯಾಗಿ ಇನ್ನೇನು ಮೂರು ದಿನ ಕಳೆದರೆ ಒಂದು ವರ್ಷ ಪೂರೈಸಲಿದೆ. ಈಗಾಗಲೇ ಎರಡು ಬಾರಿ ವಿಸ್ತರಣೆಯಾಗಿದ್ದು, ಉಳಿದಿರುವ ಸ್ಥಾನಗಳನ್ನು ಭರ್ತಿ ಮಾಡಬೇಕೆಂಬ ಕೂಗು ಕೇಳಿಬಂದಿದೆ.

ಕಳೆದ ತಿಂಗಳು ಬಿಜೆಪಿ ನಿಷ್ಠರಾದ ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ರಾಜುಗೌಡ ನಾಯಕ್, ದುರ್ಯೋಧನ ಐಹೊಳೆ, ವಿ.ರಾಮ್‍ದಾಸ್ ಸೇರಿದಂತೆ 12ಕ್ಕೂ ಹೆಚ್ಚು ಶಾಸಕರು ಪ್ರತ್ಯೇಕ ಸಭೆ ನಡೆಸಿದ್ದರು.

ಅದರಲ್ಲೂ ಬಸನಗೌಡ ಪಾಟೀಲ್ ಯತ್ನಾಳ್ ಯಡಿಯೂರಪ್ಪನವರೇ ವಿರುದ್ಧವೇ ನೇರವಾಗಿ ವಾಗ್ದಾಳಿ ನಡೆಸಿದ್ದರು. ಹೀಗಾಗಿ ಸಂಪುಟ ವಿಸ್ತರಣೆ ಹಾಗೂ ಪುನರಚನೆಯನ್ನು ಅತ್ಯಂತ ಎಚ್ಚರಿಕೆಯಿಂದ ನಿಭಾಯಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಮತ್ತೊಂದೆಡೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಸಚಿವ ಸ್ಥಾನವನ್ನು ಬಿಟ್ಟು ಬಂದ ಇಬ್ಬರೂ ನಾಯಕರಿಗೆ ಈಗ ಸಚಿವ ಸ್ಥಾನ ನೀಡಬೇಕು ಎಂಬ ಮಾತಿದೆ. ಆದರೆ, ಕುರುಬ ಸಮುದಾಯಕ್ಕೆ ಸೇರಿದ ಇಬ್ಬರು ಈಗಾಗಲೇ ಯಡಿಯೂರಪ್ಪನ ಸಂಪುಟದಲ್ಲಿದ್ದಾರೆ.

ಸರ್ಕಾರ ಬಂದು ವರ್ಷ ಪೂರೈಸಿದಾಗ ಸಚಿವರ ಕಾರ್ಯ ವೈಖರಿ ಆಧಾರದಲ್ಲಿ ಕೆಲವರನ್ನು ಕೈ ಬಿಟ್ಟು, ಹೊಸಬರಿಗೆ ಅವಕಾಶ ನೀಡುವ ಬಗ್ಗೆಯೂ ಪಕ್ಷದ ವಲಯದಲ್ಲಿ ಚರ್ಚೆ ನಡೆದಿತ್ತು. ಈಗ ಈ ಚರ್ಚೆ ಮತ್ತೆ ಆರಂಭವಾಗುವ ಸಾಧ್ಯತೆ ಇದೆ.

ರಾಜರಾಜೇಶ್ವರಿ ನಗರ ಮತ್ತು ಮಸ್ಕಿ ಕ್ಷೇತ್ರದ ಉಪಚುನಾವಣೆ ಇನ್ನೂ ನಡೆದಿಲ್ಲ. ಈ ಎರಡೂ ಕ್ಷೇತ್ರಗಳಲ್ಲಿ ಒಬ್ಬರಿಗೆ ಸಚಿವ ಸ್ಥಾನ ನೀಡಲಾಗುತ್ತದೆ. ಅದಕ್ಕಾಗಿ ಒಂದು ಸ್ಥಾನವನ್ನು ಹಾಗೆಯೇ ಉಳಿಸಿಕೊಳ್ಳಲಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಬಿಜೆಪಿ ಸರ್ಕಾರ ಬರಲು ಕಾರಣರಾದ ಶಾಸಕರು ಒಂದು ಕಡೆಯಾದರೆ ಮೂಲ ಬಿಜೆಪಿ ಶಾಸಕರು ಮತ್ತೊಂದು ಕಡೆ. ಸಂಪುಟ ವಿಸ್ತರಣೆಯ ಚರ್ಚೆ ಆರಂಭವಾದರೆ ಮೂಲ ಬಿಜೆಪಿ ಶಾಸಕರು ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುವುದು ಖಚಿತವಾಗಿದೆ. ಸಂಪುಟ ವಿಸ್ತರಣೆ ಅಂದುಕೊಂಡಷ್ಟು ಸುಲಭವಿಲ್ಲ ಎಂಬುದು ಬಿಜೆಪಿ ನಾಯಕರಿಗೂ ತಿಳಿದಿದೆ.

ಸಚಿವ ಸಂಪುಟ ವಿಸ್ತರಣೆ ಯಾರನ್ನೆಲ್ಲಾ ಸೇರಿಸಬೇಕು, ಯಾರನ್ನೆಲ್ಲಾ ಕೈಬಿಡಬೇಕು, ಖಾತೆ ಹಂಚಿಕೆ ಗೊಂದಲ ಅರ್ಹ ಶಾಸಕರಿಂದ ಪ್ರಮುಖ ಹಾಗೂ ಪ್ರಭಾವಿ ಖಾತೆಗಳಿಗೆ ಬಿಗಿ ಪಟ್ಟು, ಮೂಲ ಬಿಜೆಪಿಗರಿಂದಲೂ ಪ್ರಬಲ ಖಾತೆಗಳ ಮೇ¯ ಕಣ್ಣಿಟ್ಟಿದ್ದಾರೆ.

ಜೊತೆಗೆ ಬಿಜೆಪಿ ಶಾಸಕರ ಬಂಡಾಯ ಭುಗಿಲೇಳದಂತೆ ತಡೆಯುವುದು, ಸಚಿವ ಸ್ಥಾನ ಕೈತಪ್ಪುವ ಸಾಧ್ಯತೆ ಇರುವ ಬಿಜೆಪಿ ಹಿರಿಯ ಶಾಸಕರ ಬಂಡಾಯವನ್ನ ಶಮನಗೊಳಿಸುವುದು ಮತ್ತು ಮುಖ್ಯಮಂತ್ರಿ ಅವರ ವಿರುದ್ಧ ತಿರುಗಿ ಬೀಳದೇ ಇರುವುದನ್ನು ತಡೆಯುವುದು ಅಷ್ಟು ಸುಲಭವಲ್ಲ.

- Advertisement -
spot_img

Latest News

error: Content is protected !!