Friday, June 26, 2026
Homeಕರಾವಳಿಬಂಟ್ವಾಳ; ಮಾಣಿಗುತ್ತಿನಲ್ಲಿ ವಿವಿಧ ದೈವಗಳ ಧರ್ಮನೇಮೋತ್ಸವ

ಬಂಟ್ವಾಳ; ಮಾಣಿಗುತ್ತಿನಲ್ಲಿ ವಿವಿಧ ದೈವಗಳ ಧರ್ಮನೇಮೋತ್ಸವ

- Advertisement -
- Advertisement -

ಬಂಟ್ವಾಳ; ಮಾಣಿಗುತ್ತು ಕುಟುಂಬದ ಪೂರ್ವಿಕರ ಹರಕೆಯ ಬಾಬ್ತು ಮಾಣಿ ಶ್ರೀ ಉಳ್ಳಾಲ್ತಿ ಅಮ್ಮನವರಿಗೆ ಧರ್ಮಮೆಚ್ಚಿ, ಗ್ರಾಮ ದೈವಗಳಾದ ಅರಸು ಗುಡ್ಡೆಚಾಮುಂಡಿ, ಪ್ರಧಾನಿ ಪಂಜುರ್ಲಿ, ಬಂಟೆದಿ ಮಲೆಕೊರತಿ ದೈವಗಳಿಗೆ ಧರ್ಮನೇಮ ಮಾಣಿಗುತ್ತು ಧರ್ಮಚಾವಡಿಯಲ್ಲಿ ವಿಜ್ರಂಭಣೆಯಿಂದ ನಡೆಯಿತು.

   ತಾ. 15ನೇ ಬುಧವಾರ ರಾತ್ರಿ ದೈವಗಳ ಭಂಡಾರಯೇರಿ, ಮರುದಿನ ತಾ.16ನೇ ಗುರುವಾರ ಬೆಳಿಗ್ಗೆ ಆರಂಭದಲ್ಲಿ ಬೆಮ್ಮೆರಿಗೆ ನಡಾವಳಿ ನಡೆದು, ನಂತರ ಶ್ರೀ ಉಳ್ಳಾಲ್ತಿ ಅಮ್ಮನವರಿಗೆ ಧರ್ಮಮೆಚ್ಚಿ ನಡೆಯಿತು.  ರಾತ್ರಿ ಗ್ರಾಮದೈವಗಳಿಗೆ ಧರ್ಮನೇಮ ನಡೆಯಿತು. ಈ ಸಂದರ್ಭದಲ್ಲಿ ಗ್ರಾಮದ ಅರಸು ಗುಡ್ಡೆಚಾಮುಂಡಿ ದೈವವನ್ನು ಕುದುರೆ ಬಂಡಿಯಲ್ಲಿ ಎಳೆಯುವ ಅಪರೂಪದ ದೃಶ್ಯಾವಳಿ ಬಾಕಿಮಾರಿನಲ್ಲಿ ನಡೆಯಿತು.

   ಪೂರ್ವ ಸಂಪ್ರದಾಯದಂತೆ ಗೊನೆಮುಹೂರ್ತ, ಕೋಳಿಗುಂಟ, ಚಪ್ಪರ ಮುಹೂರ್ತ, ಹಾಳೆಗೆ ಹೋಗುವುದು, ಮೂರು ದಿನದ ಚೆಂಡು, ಹಾಳೆ ಬಾಡಿಸುವುದು, ಮಾತ್ರವಲ್ಲದೆ ವಿಶೇಷವಾಗಿ ವಾಸ್ತು ರಕ್ಷೋಘ್ನ ಹೋಮ, ಗಣಪತಿ ಹೋಮ, ಸತ್ಯನಾರಾಯಣ ಪೂಜೆ, ಹೊಸ ಬಾವಿಯಲ್ಲಿ ಗಂಗಾಪೂಜೆ ಇತ್ಯಾದಿಗಳು ಗ್ರಾಮದ ತಂತ್ರಿಗಳಾದ ಪಳನೀರು ಅನಂತ ಭಟ್ ಮತ್ತು ಅರ್ಚಕ ವೃಂದದವರಿಂದ ನಡೆಯಿತು.

 ಸಹಸ್ರ ಸಂಖ್ಯೆಯಲ್ಲಿ ಆಗಮಿಸಿದ ಭಕ್ತಾದಿಗಳಿಗೆ ಎರಡು ದಿವಸಗಳಲ್ಲಿ ಅನ್ನಸಂತರ್ಪಣೆ, ಉಪಾಹಾರ ಮಾತ್ರವಲ್ಲದೆ ಬಚ್ಚಂಗಾಯಿ, ಸೋಡ ಸರ್ಬತ್, ಬೆಲ್ಲ ನೀರು, ಪಾನಕ, ಬಚ್ಚಿರೆ ಪೂಲು ಇತ್ಯಾದಿಗಳ ಸೇವೆ ಸುಸೂತ್ರವಾಗಿ ನಡೆಯಿತು.  ಸೀಮೆಯ ತಂತ್ರಿಗಳಾದ ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು, ಪ್ರಮುಖರಾದ ಐಕಳ ಹರೀಶ್ ಶೆಟ್ಟಿ, ಕರ್ನಿರೆ ವಿಶ್ವನಾಥ ಶೆಟ್ಟಿ,ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಬಡಾಜೆಗುತ್ತು ರವಿಶಂಕರ ಶೆಟ್ಟಿ, ಮಾಜಿ ಶಾಸಕಿ ಶಕುಂತಳಾ.ಟಿ.ಶೆಟ್ಟಿ, ಕಿಶೋರ್ ಶೆಟ್ಟಿ ಕುತ್ಯಾರು, ದಾಮೋದರ ಶೆಟ್ಟಿ, ನವೀನ್ ಶೆಟ್ಟಿ, ಬೂಡಿಯಾರು ರಾಧಾಕೃಷ್ಣ ರೈ, ಸುಧೀರ್ ಶೆಟ್ಟಿ ಎಣ್ಮಕಜೆ,  ಚಂದ್ರಪ್ರಕಾಶ್ ಶೆಟ್ಟಿ ತುಂಬೆಗುತ್ತು ಮತ್ತಿತರರು ಉಪಸ್ಥಿತರಿದ್ದರು.

       ದೈವದ ಗಡಿ ಪ್ರಧಾನರಾದ ಅರೆಬೆಟ್ಟುಗುತ್ತು ಗುಡ್ಡ ಶೆಟ್ಟಿ ಯಾನೆ ರತ್ನಾಕರ ಭಂಡಾರಿ ಮತ್ತು ಗ್ರಾಮದ ಧಾರ್ಮಿಕ ಪ್ರಮುಖರ ಉಪಸ್ಥಿತಿಯಲ್ಲಿ, ಮಾಣಿಗುತ್ತು ನಾಗೇಶ್ ಶೆಟ್ಟಿ ಮತ್ತು ಕುಟುಂಬಿಕರ ಮುಂದಾಳತ್ವದಲ್ಲಿ, ಗ್ರಾಮಸ್ಥರ ಸಹಕಾರದೊಂದಿಗೆ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು

- Advertisement -

Latest News

error: Content is protected !!