ಉಡುಪಿ: ಮನೆಯ ವಾಸ್ತವ್ಯ ವಿಚಾರಕ್ಕೆ ಸಂಬಂಧಿಸಿ ಸಹೋದರರ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಉಡುಪಿ ತಾಲೂಕಿನ ಬಡಗುಬೆಟ್ಟು ಗ್ರಾಮದ ಕಬ್ಯಾಡಿ ಎಂಬಲ್ಲಿ ಮಾ.16ರಂದು ಸಂಜೆ ನಡೆದಿರುವುದು ವರದಿಯಾಗಿದೆ.
ಕಂಬಳಕಟ್ಟ ನಿವಾಸಿ ಪಾಂಡು ನಾಯ್ಕ ಎಂಬವರ ಪುತ್ರ ಬಾಲಕೃಷ್ಣ(43) ಕೊಲೆಯಾದವರು.
ಕಂಬಳಕಟ್ಟ ಎಂಬಲ್ಲಿನ ದಯಾನಂದ ಎಂಬಾತ ತನ್ನ ಅಣ್ಣ ಬಾಲಕೃಷ್ಣನ ತಲೆಗೆ ಕತ್ತಿಯಿಂದ ಕಡಿದು ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ಮನೆಯ ವಾಸ್ತವ್ಯದ ವಿಚಾರದಲ್ಲಿ ಬಾಲಕೃಷ್ಣ ಮತ್ತು ಅವನ ಸಹೋದರ ದಯಾನಂದ ಅವರ ಮನೆಯಲ್ಲಿ ಗಲಾಟೆ ನಡೆದಿದೆ.
ಇದೇ ದ್ವೇಷದಿಂದ ದಯಾನಂದನು ಮನೆಯಲ್ಲಿದ್ದ ಕತ್ತಿಯಿಂದ ಬಾಲಕೃಷ್ಣನ ತಲೆಗೆ ಕಡಿದು ಹಲ್ಲೆ ಮಾಡಿದ್ದಾನೆ. ಹಲ್ಲೆಯಿಂದ ಗಂಭೀರ ಸ್ವರೂಪದ ಕಡಿದ ಗಾಯದಿಂದಾಗಿ ತೀವ್ರ ರಕ್ತ ಸ್ರಾವವಾಗಿ ಬಾಲಕೃಷ್ಣ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಮಣಿಪಾಲ ಠಾಣಾ ನಿರೀಕ್ಷಕ ಮಂಜುನಾಥ್, ಠಾಣಾಧಿಕಾರಿಗಳಾದ ರಾಜಶೇಖರ್ ಹೊಂದಾಳೆ, ಸುಧಾಕರ ತೋನ್ಸೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ನಿತ್ಯಾನಂದ ನಾಯ್ಕ ಎಂಬವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.