ಉಡುಪಿ: ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ನಡೆದಿರುವ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಬ್ ಇನ್ಸ್ಪೆಕ್ಟರ್ ಹಾಗು ಹೆಡ್ ಕಾನ್ಸ್ಟೇಬಲ್ ಇಬ್ಬರನ್ನು ಅಮಾನತುಗೊಳಿಸಲಾಗಿದೆ.
ಎಸ್ ಐ ಮಧು ಮತ್ತು ಹೆಡ್ ಕಾನ್ಸ್ ಟೇಬಲ್ ಸುಜಾತ ಅಮಾನತುಗೊಂಡ ಪೊಲೀಸ್ ಅಧಿಕಾರಿಗಳಾಗಿದ್ದು, ಆರೋಪಿಗಳನ್ನು ಬಂಧಿಸುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಸರಿಯಾಗಿ ಪಾಲಿಸಿಲ್ಲ ಎಂಬ ಆರೋಪದಡಿ ಅಮಾನತುಗೊಳಿಸಲಾಗಿದೆ.
ಅಕ್ಟೋಬರ್ 10 ರಂದು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕೇರಳ ಮೂಲದ ಬಿಜು ಮೋಹನ್( 44) ಎಂಬ ಆರೋಪಿ
ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಸಾವನ್ನಪ್ಪಿದ್ದನು.
ಕೊಚ್ಚಿನ್ ಶಿಪ್ ಯಾರ್ಡ್ ನಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಬಿಜು ಮೋಹನ್ ನನ್ನು ಮದ್ಯ ಸೇವಿಸಿ ಮಹಿಳೆಯನ್ನು ಚುಡಾಯಿಸಿದ್ದ ಆರೋಪದಡಿ ಪೊಲೀಸರು ವಶಕ್ಕೆ ಪಡೆದಿದ್ದರು.
ಲಾಕಪ್ ಡೆತ್ ಪ್ರಕರಣ ಸಂಬಂಧ ಈಗಾಗಲೇ ಸಿಐಡಿ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಮೃತ ಬಿಜು ಸಹೋದರ ಅನೀಶ್ ಡೆನಿಲ್ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.