ಉಡುಪಿ : ನಗರದ ಬ್ರಹ್ಮಗಿರಿ -ಬನ್ನಂಜೆ ಮಾರ್ಗದ ಉಡುಪಿ ತಾ.ಪಂ. ವ್ಯಾಪ್ತಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ಸಮೀಪದ ಮಕ್ಕಳ ಆಟದ ಪಾರ್ಕ್‌ನಲ್ಲಿ ಬೆಳೆದು ನಿಂತ ಗಿಡಗಂಟಿಗಳನ್ನು ತೆರವುಗೊಳಿಸಿದ್ದು, ಮಕ್ಕಳು ಆಟವಾಡಲು ಪಾರ್ಕ್ ಸಿದ್ಧಗೊಂಡಿದೆ.
ನಗರದಲ್ಲಿ ಅಜ್ಜರಕಾಡು ಪಾರ್ಕ್ ಹೊರತುಪಡಿಸಿದರೆ, ಬನ್ನಂಜೆ ಬಾಲ ಭವನದಲ್ಲಿರುವ ಮಕ್ಕಳಿಗೆ ಪಾರ್ಕ್ ಬೇಡಿಕೆ ಇತ್ತು . ಪ್ರಸ್ತುತ ಮಕ್ಕಳಿಗೆ ಸಾಲು -ಸಾಲು ರಜೆ ಇರುವುದರಿಂದ ಪಾರ್ಕ್‌ಗೆ ಬರುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅಜ್ಜರಕಾಡು ಪಾರ್ಕ್‌ನಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬ್ರಹ್ಮಗಿರಿಯ ಸಮೀಪದವರು ಬಾಲಭವನದ ಸಮೀಪ ಇರುವ ಪಾರ್ಕ್ ಕಡೆಗೆ ಮುಖ ಹಾಕುತ್ತಿದ್ದಾರೆ. ಆದರೆ ಈ ಹಿಂದೆ ಮಕ್ಕಳ ಆಟದ ಪರಿಕರಗಳಿರುವ ಜಾಗದಲ್ಲಿ ಪೊದೆಗಳು ಬೆಳೆದು ನಿಂತಿದ್ದವು. ಇದರಲ್ಲಿ ವಿಷ ಜಂತುಗಳು ಅಡಗಿ ಮಕ್ಕಳ ಜೀವಕ್ಕೆ ಅಪಾಯವಾಗುವ ಸಾಧ್ಯತೆಗಳು ಹೆಚ್ಚಿತ್ತು.ಹಾಗಾಗಿ ಮಹಿಳಾ ಮತ್ತು ಮಕ್ಕಳ ಇಲಾಖೆಯು ಪಾರ್ಕ್ ಅನ್ನು ಸ್ವಚ್ಛಗೊಳಿಸಿ ಆಟವಾದಲ್ಲು ಯೋಗ್ಯ ಸ್ಥಳವನ್ನಾಗಿಸಿದೆ .


