Sunday, June 7, 2026
Homeತಾಜಾ ಸುದ್ದಿಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್; ಸಿದ್ದರಾಮಯ್ಯ ವ್ಯಂಗ್ಯ

ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್; ಸಿದ್ದರಾಮಯ್ಯ ವ್ಯಂಗ್ಯ

- Advertisement -
- Advertisement -

ಹಾವೇರಿ: ಬಸವರಾಜ ಬೊಮ್ಮಾಯಿ ಅವರು ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಮುಗಿಸಲು ಪ್ಲಾನ್ ಮಾಡಿ, ಯಡಿಯೂರಪ್ಪಗೆ ಟಾಂಗ್ ಕೊಟ್ಟರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವ್ಯಂಗ್ಯವಾಡಿದರು.‌

ಅವರು ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಚಂದಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಗೆಲುವಿಗೆ ಪ್ರಚಾರ ಕೈಗೊಂಡು ಮಾತನಾಡಿ, “ಬಿಜೆಪಿಗೆ ಸೇರುವ ಮೊದಲು ಎಚ್.ಡಿ.ಕುಮಾರಸ್ವಾಮಿ ಮೋದಿ ಮಹಾನ್ ಸುಳ್ಳುಗಾರ ಎಂದಿದ್ದರು. ಅವರ ತಂದೆ ದೇವೆಗೌಡರು, ಮೋದಿ ಮತ್ತೆ ಪ್ರಧಾನಿ ಆದರೆ ದೇಶ ಬಿಟ್ಟು ಹೋಗುತ್ತೇನೆಂದು ಹೇಳಿದ್ದರು. ಈಗ ಇಬ್ಬರೂ ಭಾಯ್ ಭಾಯ್ ಆಗಿದ್ದಾರೆ,” ಎಂದು ತಿಳಿಸಿದರು.

“ಶಿಗ್ಗಾವಿ ಕ್ಷೇತ್ರದ ಜನತೆಗೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಅಭ್ಯರ್ಥಿಯನ್ನು ಆರಿಸುವ ಮತ್ತೊಂದು ಅವಕಾಶ ಸಿಕ್ಕಿದ್ದು, ಇಲ್ಲಿನ‌ ಬಿಜೆಪಿ ಅಭ್ಯರ್ಥಿ ಅತ್ಯಂತ ಶ್ರೀಮಂತ ಕುಟುಂಬದಿಂದ ಬಂದವರು. ಅವರಿಗೆ ಹಳ್ಳಿ ಬದುಕು ಗೊತ್ತಿಲ್ಲ. ಬಡವರ ಬದುಕು ಗೊತ್ತಿಲ್ಲ. ಆದರೆ ಕಾಂಗ್ರೆಸ್ ಅಭ್ಯರ್ಥಿ ಅತ್ಯಂತ ಸಾಮಾನ್ಯ ಕುಟುಂಬದಿಂದ ಬಂದು ಬಡವರ ಕಷ್ಟ, ಸುಖ ಗೊತ್ತಿರುವವರು‌. ಇವರನ್ನು ಗೆಲ್ಲಿಸಿ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿ ಆಗುತ್ತದೆ. ಇನ್ನು ನಮ್ಮ ಸರ್ಕಾರ ಐದು ಗ್ಯಾರಂಟಿಗಳ ಮೂಲಕ ಇಡೀ ರಾಜ್ಯದ ಮಹಿಳೆಯರಿಗೆ ಆರ್ಥಿಕ‌ ಶಕ್ತಿ ನೀಡಿದ್ದೇವೆ. ಎಲ್ಲಾ ಜಾತಿಯ, ಎಲ್ಲಾ ಧರ್ಮದ ಬಡವರ ಖಾತೆಗಳಿಗೆ ನೇರವಾಗಿ 56 ಸಾವಿರ ಕೋಟಿ ರೂಪಾಯಿಯನ್ನು ಹಾಕಿದ್ದೇವೆ. ಬಸವರಾಜ ಬೊಮ್ಮಾಯಿಯನ್ನು ಶಕುನಿ ಎಂದು ಈಗಷ್ಟೆ ಎಲ್ಲಾ ಹೇಳಿದರು. ಒಳ ಒಪ್ಪಂದ ಮಾಡಿಕೊಂಡು ರಾಜಕಾರಣ ಮಾಡುವ ಬೊಮ್ಮಾಯಿ ಅಂತವರು ರಾಜಕಾರಣದಲ್ಲಿ ಇರಬಾರದು. ಆದ್ದರಿಂದ ಪಠಾಣ್ ಅವರನ್ನು ಗೆಲ್ಲಿಸಿ ಕಳುಹಿಸಿ. ಅಜ್ಜಂಪೀರ್ ಖಾದ್ರಿ ಅವರಿಗೂ ಒಳ್ಳೆಯ ಅವಕಾಶ ಕಲ್ಪಿಸುತ್ತೇನೆ,” ಎಂದರು.

ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ, ಈ ಬಾರಿ ಶಿಗ್ಗಾವಿಯಲ್ಲಿ ಕಾಂಗ್ರೆಸ್ ಗೆಲ್ಲುವುದು ಅಷ್ಟೇ ಸತ್ಯ. ಇಲ್ಲಿ ಕಾಂಗ್ರೆಸ್ ಗೆದ್ದರೆ ನನಗೆ, ನನ್ನ ಸರ್ಕಾರಕ್ಕೆ ಹೆಚ್ಚಿನ ಶಕ್ತಿ ಬರುತ್ತದೆ ಎಂದರು.

ಸಮಾವೇಶದಲ್ಲಿ ಸಚಿವರಾದ ಈಶ್ವರ ಖಂಡ್ರೆ, ಶಿವಾನಂದ ಪಾಟೀಲ, ಕೆ.ಜೆ.ಜಾರ್ಜ್, ರಹೀಂ ಖಾನ್, ವಿಪಕ್ಷ ಮುಖ್ಯ ಸಚೇತಕ ಸಲೀಂ ಅಹ್ಮದ್, ಮಾಜಿ ಸಚಿವರಾದ ಎಚ್.ಆಂಜನೇಯ, ಆರ್.ಶಂಕರ್, ಶಾಸಕರಾದ ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣನವರ, ಪ್ರಸಾದ ಅಬ್ಬಯ್ಯ, ವಿಪ ಸದಸ್ಯರಾದ ಪ್ರಕಾಶ ರಾಠೋಡ, ನಾರಾಯಣ ಸ್ವಾಮಿ, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಮಾಜಿ ಶಾಸಕರಾದ ಅಜ್ಜಂಫೀರ್ ಖಾದ್ರಿ, ಅಶೋಕ ಮನಗೂಳಿ, ಕಾಂಗ್ರೆಸ್ ಅಭ್ಯರ್ಥಿ ಯಾಸೀರಖಾನ್ ಪಠಾಣ, ಸೋಮಣ್ಣ ಬೇವಿನಮರದ, ಸಂಜೀವಕುಮಾರ ನೀರಲಗಿ, ಬಿ.ಆರ್.ಯಾವಗಲ್ಲ, ವಿ.ಎಸ್.ಪಾಟೀಲ ಇತರರು ಇದ್ದರು.

- Advertisement -

Latest News

error: Content is protected !!