
ನವದೆಹಲಿ: ವಾಣಿಜ್ಯ ಬಳಕೆಯ ಎಲ್‌ಪಿಜಿ ಪೂರೈಕೆ ಮೇಲಿನ ನಿರ್ಬಂಧ ತೆರವುಗೊಳಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಗ್ರಾಹಕರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಇಂದಿನಿಂದ (ಜುಲೈ 1) ಜಾರಿಗೆ ಬರುವಂತೆ 19 ಕೆ.ಜಿ ತೂಕದ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯನ್ನು 183.50 ರೂಪಾಯಿ ಇಳಿಕೆ ಮಾಡಲಾಗಿದೆ. ಈ ಮೂಲಕ ಈವರೆಗೆ 3,113.50 ರೂಪಾಯಿ ಇದ್ದ ಸಿಲಿಂಡರ್ ದರ ಈಗ 2,930 ರೂಪಾಯಿಗೆ ಕುಸಿದಿದೆ.ಆದರೆ, ಸಾರ್ವಜನಿಕರು ಬಳಸುವ 14.2 ಕೆ.ಜಿ ತೂಕದ ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ತೈಲ ಕಂಪನಿಗಳು ಯಾವುದೇ ಬದಲಾವಣೆ ಮಾಡಿಲ್ಲ.
ಮಧ್ಯಪ್ರಾಚ್ಯ ಸಂಘರ್ಷದ ಹಿನ್ನೆಲೆಯಲ್ಲಿ ಅಮೆರಿಕ ಹಾಗೂ ಇಸ್ರೇಲ್ ದಾಳಿಗೆ ಪ್ರತಿಯಾಗಿ ಇರಾನ್ ದೇಶವು ತನ್ನ ನಿಯಂತ್ರಣದಲ್ಲಿದ್ದ ಹೊರ್ಮುಜ್ ಜಲಸಂಧಿಯನ್ನು ಬಂದ್ ಮಾಡಿತ್ತು. ಇದರಿಂದ ಕಚ್ಚಾ ತೈಲ ಮತ್ತು ಎಲ್‌ಪಿಜಿ ಸಾಗಿಸುವ ಹಡಗುಗಳ ಸಂಚಾರ ಸ್ಥಗಿತಗೊಂಡು ಜಾಗತಿಕ ಇಂಧನ ಬಿಕ್ಕಟ್ಟು ಎದುರಾಗಿತ್ತು. ಈ ಪೂರೈಕೆ ವ್ಯತ್ಯಯದಿಂದಾಗಿ ಭಾರತದಲ್ಲಿ ವಾಣಿಜ್ಯ ಎಲ್‌ಪಿಜಿ ದರವನ್ನು ಕಳೆದ ನಾಲ್ಕು ತಿಂಗಳಲ್ಲಿ (ಮಾರ್ಚ್‌ನಿಂದ ಜೂನ್‌ವರೆಗೆ) ನಾಲ್ಕು ಹಂತಗಳಲ್ಲಿ ಒಟ್ಟು 1,374.50 ರೂಪಾಯಿಗಳಷ್ಟು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಲಾಗಿತ್ತು. ಇದೀಗ ನಿರ್ಬಂಧ ತೆರವುಗೊಂಡ ಹಿನ್ನೆಲೆಯಲ್ಲಿ ಬೆಲೆ ಇಳಿಕೆಯಾಗಿದ್ದು, ಹೋಟೆಲ್ ಹಾಗೂ ವಾಣಿಜ್ಯ ಉದ್ದಿಮೆದಾರರಿಗೆ ದೊಡ್ಡ ನಿರಾಳತೆ ಸಿಕ್ಕಂತಾಗಿದೆ.


