Saturday, May 18, 2024
Homeಕರಾವಳಿಮಂಗಳೂರು: ರಕ್ಷಣೆಗಾಗಿ ಪೊಲೀಸ್ ಎದೆಯಲ್ಲಿ ಕ್ಯಾಮೆರಾ ಕಣ್ಗಾವಲು!

ಮಂಗಳೂರು: ರಕ್ಷಣೆಗಾಗಿ ಪೊಲೀಸ್ ಎದೆಯಲ್ಲಿ ಕ್ಯಾಮೆರಾ ಕಣ್ಗಾವಲು!

spot_img
- Advertisement -
- Advertisement -

ಮಂಗಳೂರು: ಪೊಲೀಸರು ಮತ್ತು ಸಾರ್ವಜನಿಕರಿಗೆ “ರಕ್ಷಣೆ’ ಒದಗಿಸಬಲ್ಲ ‘ಬಾಡಿ ಕೆಮರಾ’ ಗಳನ್ನು ವಾಹನ ತಪಾಸಣೆ ವೇಳೆ ಬಳಸಲು ಮಂಗಳೂರು ಸಂಚಾರ ವಿಭಾಗದ ಪೊಲೀಸರು ಮುಂದಾಗಿದ್ದಾರೆ.

ಬಾಡಿ ಕೆಮರಾಗಳು ವಾಹನಗಳ ತಪಾಸಣೆಯ ವೇಳೆ ಪೊಲೀಸರು ದರ್ಪದಿಂದ, ಒರಟಾಗಿ ನಡೆದುಕೊಳ್ಳುವುದು, ಮಾತಿನ ಚಕಮಕಿ, ಸಂಘರ್ಷದ ವಾತಾವರಣ ಸಾರ್ವಜನಿಕರು ಆಕ್ರೋಶಭರಿತರಾಗಿ ವರ್ತಿಸುವುದು, ಮೊದಲಾದವುಗಳನ್ನು ತಪ್ಪಿಸಲು ಇದು ನೆರವಿಗೆ ಬರುತ್ತದೆ. ಮಂಗಳೂರು ಪೊಲೀಸರ ಬಳಿ ಸದ್ಯಕೆ ಕೆಲವೇ ಕೆಲವು ಸಂಖ್ಯೆಯಲ್ಲಿ ಬಾಡಿ ಕೆಮರಾಗಳಿದ್ದು ಇನ್ನಷ್ಟು ಬಾಡಿ ಕೆಮರಾಗಳಿಗೆ ಬೇಡಿಕೆ ಇದೆ.

ಬಾಡಿ ಕೆಮರಾಗಳು ದೃಶ್ಯ ಮತ್ತು ಧ್ವನಿ ಎರಡನ್ನೂ ಚಿತ್ರೀಕರಿಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದು, ಅಗತ್ಯ ಬಿದ್ದಾಗ ಅದನ್ನು ಪರಿಶೀಲಿಸಬಹುದಾಗಿದೆ. ಸಾರ್ವಜನಿಕರು ಅಥವಾ ಕರ್ತವ್ಯದಲ್ಲಿರುವ ಪೊಲೀಸರು ದುರ್ವರ್ತನೆ ತೋರಿದರೆ ಅದು “ಬಾಡಿ ಕೆಮರಾ’ದಲ್ಲಿ ದಾಖಲಾಗುವುದರಿಂದ ತಪ್ಪು ಮಾಡಿದವರು ಅವರ ತಪ್ಪನ್ನು ಅಲ್ಲಗಳೆಯಲು ಅವಕಾಶ ಇರುವುದಿಲ್ಲ. ಈಗಾಗಲೇ ಸಂಚಾರಿ ಪೊಲೀಸರಿಗೂ ಸಂಯಮದ ವರ್ತನೆಗೆ ಸೂಚನೆ ನೀಡಲಾಗಿದೆ. ಸಾರ್ವಜನಿಕರೂ ಸಹಕರಿಸುತ್ತಿದ್ದಾರೆ. ಆದರೆ ಕೆಲವೊಮ್ಮೆ ಅನಪೇಕ್ಷಿತ ಘಟನೆಗಳು ನಡೆಯುವ ಸಾಧ್ಯತೆಗಳು ಇರುವುದರಿಂದ “ಬಾಡಿ ಕೆಮರಾ’ಗಳನ್ನು ಬಳಸುವುದು ಸೂಕ್ತವಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಸಂಚಾರ ವಿಭಾಗದ ಪ್ರತಿ ಪೊಲೀಸ್‌ ಠಾಣೆಗೆ 2ರಿಂದ 4 ಬಾಡಿ ಕೆಮರಾ ನೀಡಲಾಗಿದ್ದು, ಈಗ ಪ್ರಮುಖ ಸ್ಥಳಗಳಲ್ಲಿ ಮಾತ್ರ ಇವುಗಳನ್ನು ಬಳಸಲಾಗುತ್ತಿದೆ. ವಾಹನಗಳ ಸಂಖ್ಯೆ, ತಪಾಸಣೆ ಹೆಚ್ಚುತ್ತಿರುವುದರಿಂದ ಬಾಡಿ ಕೆಮರಾಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂಬುದು ಪೊಲೀಸ್‌ ಸಿಬ್ಬಂದಿಗಳ ಬೇಡಿಕೆ.

ಕೆಲವು ಪಾಯಿಂಟ್‌ಗಳಲ್ಲಿ ಒಬ್ಬೊಬ್ಬರೇ ಕೆಲಸ ಮಾಡುವಾಗ ಮೊಬೈಲ್‌ನಿಂದ ರೆಕಾರ್ಡ್‌ ಮಾಡಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭ ನಮಗೆ ಬಾಡಿ ಕೆಮರಾ ತುಂಬಾ ಉಪಯೋಗಕ್ಕೆ ಬರುತ್ತದೆ. ಕರ್ತವ್ಯಕ್ಕೆ ಅಡ್ಡಿ ಪಡಿಸುವವರ ದೃಶ್ಯ ದಾಖಲಾಗುವುದರಿಂದ ನಮಗೆ ಸಾಕ್ಷಿ ದೊರೆಯುತ್ತದೆ ಎನ್ನುತ್ತಾರೆ ಸಂಚಾರಿ ಪೊಲೀಸ್ ಸಿಬ್ಬಂದಿ.

ಈಗಾಗಲೇ ನಗರದಲ್ಲಿ ಕಳೆದ ತಿಂಗಳು ಸಿಗ್ನಲ್‌ ಜಂಪ್‌ ಮಾಡಿದ ಓರ್ವನನ್ನು ಪೊಲೀಸರು ವಿಚಾರಿಸಿದಾಗ ಆತ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ದೂರು ದಾಖಲಾಗಿತ್ತು. ಅಲ್ಲದೆ ಟೋಯಿಂಗ್‌ ಸಂದರ್ಭ ಪೊಲೀಸರ ಜತೆ ಮಾತಿನ ಚಕಮಕಿಯ ಘಟನೆಗಳು ನಡೆದಿದ್ದವು. ಕಳೆದ ವಾರ ಹೆಲ್ಮೆಟ್‌ ಹಾಕದೆ ಸಂಚಾರ ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದ ಬೈಕ್‌ ಸವಾರರನ್ನು ತಡೆದು ನಿಲ್ಲಿಸಿದ ಗೃಹರಕ್ಷಕ ಮಹಿಳಾ ಸಿಬ್ಬಂದಿಯನ್ನು ನಿಂದಿಸಲಾಗಿತ್ತು. ಹಲವೆಡೆ ಪೊಲೀಸರು ಸಂಯಮ ಕಳೆದುಕೊಂಡು ವರ್ತಿಸಿದ್ದಾರೆ ಎಂಬ ದೂರುಗಳು ಕೇಳಿಬಂದಿದ್ದವು.

ಬಾಡಿ ಕೆಮರಾಗಳ ಅಗತ್ಯದ ಬಗ್ಗೆ ನ್ಯಾಯಾಲಯಗಳು,ಸರಕಾರ ಕೂಡ ಹೇಳಿವೆ. ಮಂಗಳೂರಿನಲ್ಲಿ ಸದ್ಯ ಕಡಿಮೆ ಸಂಖ್ಯೆಯಲ್ಲಿ ಬಾಡಿ ಕೆಮರಾ ಬಳಕೆ ಮಾಡಲಾಗುತ್ತಿದೆ. ಬೇಡಿಕೆ ಹೆಚ್ಚಿದ್ದು ಇದನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಇಂತಹ ಕೆಮರಾಗಳು ಕರ್ತವ್ಯ ನಿರತ ಪೊಲೀಸರ ಸುರಕ್ಷತೆ ದೃಷ್ಟಿಯಿಂದಲೂ ಪೂರಕವಾಗಿವೆ.

- Advertisement -
spot_img

Latest News

error: Content is protected !!