Monday, May 13, 2024
Homeಕರಾವಳಿಉಡುಪಿಉಡುಪಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ - ನಾಲ್ಕು ವರ್ಷದ ನಂತರ ಜ್ಯೋತಿಷಿ ನಿರಂಜನ್ ಭಟ್'ಗೆ...

ಉಡುಪಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ – ನಾಲ್ಕು ವರ್ಷದ ನಂತರ ಜ್ಯೋತಿಷಿ ನಿರಂಜನ್ ಭಟ್’ಗೆ ಮಧ್ಯಂತರ ಜಾಮೀನು

spot_img
- Advertisement -
- Advertisement -

ಉಡುಪಿ: ಬಹುಕೋಟಿ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಸೂತ್ರದಾರ ಜ್ಯೋತಿಷಿ ನಿರಂಜನ್ ಭಟ್ (30) ಗೆ ಉಡುಪಿ ಜಿಲ್ಲಾ ನ್ಯಾಯಾಲಯ ತಂದೆ ಮೃತಪಟ್ಟ ಹಿನ್ನಲೆಯಲ್ಲಿ ಜು.7 ರವರೆಗೆ ಷರತ್ತುಬದ್ದ ಮಧ್ಯಂತರ ಜಾಮೀನು ನೀಡಿದೆ.

ನಾಲ್ಕು ವರ್ಷಗಳ ಹಿಂದೆ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ನಡೆದಿತ್ತು. ಅವರ ಪತ್ನಿ ರಾಜೇಶ್ವರಿ ಮತ್ತು ಪುತ್ರ ನವನೀತ್ ಕೊಲೆ ಮಾಡಿದ್ದರು. ಭಾಸ್ಕರ್ ಶೆಟ್ಟಿ ಮನೆಯ ಪುರೋಹಿತ ನಿರಂಜನ್ ಭಟ್ ಕೂಡ ಈ ಕೊಲೆಯಲ್ಲಿ ಶಾಮೀಲಾಗಿದ್ದ. ಕೊಲೆ ಮಾಡಿ ಶವವನ್ನ ಹೋಮಕುಂಡದಲ್ಲಿ ಸುಟ್ಟು ಭಸ್ಮ ಮಾಡಲಾಗಿತ್ತು.

ಈ ಕೊಲೆ ಪ್ರಕರಣದ 3 ನೇ ಆರೋಪಿ ಜ್ಯೋತಿಷಿ ನಿರಂಜನ್ ಭಟ್ ಕಳೆದ ನಾಲ್ಕು ವರ್ಷಗಳಿಂದ ಜೈಲಿನಲ್ಲಿದ್ದಾರೆ. ಆರೋಪಿ ಜ್ಯೋತಿಷಿ ನಿರಂಜನ್ ಭಟ್ ಅವರ ತಂದೆ ಹಾಗೂ ಇದೇ ಪ್ರಕರಣದ ನಾಲ್ಕನೆಯ ಆರೋಪಿಯಾಗಿದ್ದ ಶ್ರೀನಿವಾಸ್ ಭಟ್ (65) ಅವರು ಕಳೆದೆರಡು ದಿನಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ತಂದೆಯ ಉತ್ತರಕ್ರಿಯೆಯ ಕಾರ್ಯವನ್ನು ನೆರವೇರಿಸಲು ಜಾಮೀನು ನೀಡಬೇಕು ಎಂದು ನಿರಂಜನ್ ಪರ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ವಾದ ಆಲಿಸಿದ ನ್ಯಾಯಾಲಯ ಐದು ಲಕ್ಷ ರೂ. ಬಾಂಡ್ ಪಡೆದು ಏಳು ದಿನಗಳ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ. ಪ್ರಕರಣ ನಾಲ್ಕನೇ ಆರೋಪಿಯಾಗಿದ್ದ ಮೃತ ಶ್ರೀನಿವಾಸ್ ಭಟ್ , ಹಾಗೂ ಚಾಲಕ ರಾಘವೇಂದ್ರ ಎಂಬಾತ ಬಂಧಿತನಾಗಿದ್ದರೂ ಆ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿತ್ತು.

ಪುರೋಹಿತ ನಿರಂಜನ್ ಭಟ್ ಜೊತೆ ರಾಜೇಶ್ವರಿ ಸಂಬಂಧ ಇಟ್ಟುಕೊಂಡಿದ್ದನ್ನು ಭಾಸ್ಕರ್​ ಅರಿತಿದ್ದರು. ಹಾಗಾಗಿ​ ವಿಲ್​ನಲ್ಲಿ ಪತ್ನಿ ಮತ್ತು ಮಗನಿಗೆ ಯಾವುದೇ ಆಸ್ತಿ ಬರೆದಿರಲಿಲ್ಲ. “ತನ್ನ ಹೆಂಡತಿ ಮಗನಿಗೆ ನನ್ನ ಆಸ್ತಿಯಲ್ಲಿ ಯಾವುದೇ ಪಾಲು ಸಿಗಬಾರದು. ನನ್ನ ತಾಯಿ ಹಾಗೂ ಸಹೋದರ ಹಾಗೂ ಸಹೋದರಿಯರಿಗೆ ಆಸ್ತಿ ಸೇರಬೇಕು. ನಾನು ಅಕಾಲಿಕ ಮರಣವನ್ನಪ್ಪಿದರೆ ವಿಲ್​​ ಜಾರಿಗೆ ಬರಲಿದೆ” ಎಂದು ವಿಲ್​ನಲ್ಲಿ ಉಲ್ಲೇಖಿಸಲಾಗಿತ್ತು. ಇದನ್ನು ತಿಳಿದ ರಾಜೇಶ್ವರಿ ಪತಿಯನ್ನು ಕೊಲೆ ಮಾಡಲು ಮೂಹೂರ್ತ ಇಟ್ಟಿದ್ದಳು. ವಿಲ್ ಬರೆದ 13 ದಿನಕ್ಕೆ ಆತ ಕೊಲೆಯಾಗಿದ್ದರು.

ಹೋಮಕುಂಡದಲ್ಲಿ ಸಿಕ್ಕ ರಕ್ತದ ಕಲೆ ಹಾಗೂ ದೇಹ ಕತ್ತರಿಸಿದಾಗ ಗೋಡೆಗೆ ಸಿಡಿದ ರಕ್ತವನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಅದು ಭಾಸ್ಕರ್​ ಶೆಟ್ಟಿ ಕೊಲೆ ಎನ್ನುವ ವಿಚಾರ ಬೆಳಕಿಗೆ ಬಂದಿತ್ತು.

- Advertisement -
spot_img

Latest News

error: Content is protected !!