ಉಡುಪಿ : ನಗರದ ಬೆಳ್ವೆ ಸೇಂಟ್ ಜೋಸೆಫ್ ಅಗ್ರಿಕಲ್ಚರಲ್ ಕಾಲೋನಿ ಚರ್ಚ್‌ಗೆ ಸಂಬಂಧಿಸಿದಂತೆ ಪ್ರಕಟವಾದ ಮಾಧ್ಯಮ ವರದಿಗಳಿಗೆ ಉಡುಪಿ ಕ್ಯಾಥೋಲಿಕ್ ಧರ್ಮಪ್ರಾಂತ್ಯ ಸ್ಪಷ್ಟನೆ ನೀಡಿದೆ.
ಬೆಳ್ವೆ ಚರ್ಚ್‌ಗೆ ಸಂಬಂಧಿಸಿದಂತೆ ನಡೆದ ಪ್ರತಿಭಟನೆಯಲ್ಲಿ ಪ್ರತಿಭಟನಕಾರ ಆರೋಪಗಳು ನೈಜತೆಗೆ ದೂರವಾಗಿದ್ದು ಉಡುಪಿ ಧರ್ಮಪ್ರಾಂತ್ಯದಿಂದ ಪ್ರಕಟವಾದ ಸ್ಪಷ್ಟೀಕರಣದಲ್ಲಿ ಕೆಲವು ಪ್ರಮುಖ ಅಂಶಗಳಿಗೆ ಸ್ಪಷ್ಟನೆ ನೀಡಲಾಗಿದೆ.
ಸ್ಪಷ್ಟೀಕರಣದ ಪ್ರಕಟನೆಯಲ್ಲಿ, ಚರ್ಚ್ ಗೇಟ್ ಮುಚ್ಚಲಾಗಿತ್ತು ಹಾಗೂ ಭಕ್ತರು ಚರ್ಚ್‌ಗೆ ಪ್ರವೇಶಿಸಲು ಅವಕಾಶ ನೀಡದಿರುವ ಆರೋಪವು ವಾಸ್ತವಕ್ಕೆ ದೂರವಾಗಿದ್ದು ,ಅಕ್ಟೋಬರ್ 24 ರಂದು ಬೆಳಿಗ್ಗೆ ಪ್ರತಿನಿತ್ಯದ ಪೂಜೆ ನಡೆದು ಭಕ್ತರು ಆಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ಸ್ಪಷ್ಟನೆ ನೀಡಲಾಗಿದೆ.
ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಅವರಿಂದ ಲಿಖಿತ ಅನುಮತಿ ಪಡೆದು ಧರ್ಮಗುರುಗಳು ಇಕ್ಕಟ್ಟಾಗಿದ್ದ ಕಚೇರಿ ಮತ್ತು ಶೌಚಾಲಯಗಳ ವಿಸ್ತರಣೆ ಕಾರ್ಯವನ್ನು ಪ್ರಾರಂಭಿಸಿದರು. ಆದರೆ ಇದರಿಂದ ಚರ್ಚ್ ಕಟ್ಟಡಕ್ಕೆ ಯಾವುದೇ ಹಾನಿಯಾಗಲಿಲ್ಲ.ಅಕ್ಟೋಬರ್ 05 ರಂದು ಉಡುಪಿಯ ಬಿಷಪ್ ನಿವಾಸದಲ್ಲಿ ಬೆಳ್ವೆಯ ಪ್ರತಿನಿಧಿ ಮತ್ತು ಧರ್ಮಪ್ರಾಂತ್ಯದ ಆಡಳಿತ ಮಂಡಳಿಯ ಜಂಟಿ ಸಭೆ ನಡೆದ್ದಿದು ಇದರಲ್ಲಿ ಎಲ್ಲಾ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಧರ್ಮಗುರುಗಳನ್ನು ವರ್ಗಾವಣೆ ಮಾಡಬೇಕೆಂಬ ಬೇಡಿಕೆಯ ಹೊರತಾಗಿ ಉಳಿದೆಲ್ಲ ಬೇಡಿಕೆಗಳನ್ನು ಕೈಬಿಟ್ಟಿರುವುದಾಗಿ ಬೆಳ್ವೆಯ ಪ್ರತಿನಿಧಿಗಳು ಲಿಖಿತವಾಗಿ ಮಾತು ಕೊಟ್ಟಿದ್ದರು.
ಕ್ಯಾಥೋಲಿಕ್ ಚರ್ಚ್ ಮತ್ತು ಡಯಾಸಿಸ್ ನ ನಿಯಮಗಳ ಪ್ರಕಾರ ಯಾವುದೇ ಚರ್ಚ್ / ಸಂಸ್ಥೆ / ವಸಾಹತುಗಳಿಗೆ ಯಾವುದೇ ಪಾದ್ರಿ / ನಿರ್ದೇಶಕರನ್ನು ನೇಮಿಸಲು / ವರ್ಗಾಯಿಸವ ಪರಮಾಧಿಕಾರ ಬಿಷಪ್ ಅವರದ್ದಾಗಿದೆ. ಇದು ಕಥೋಲಿಕ್ ಧರ್ಮಸಭೆಯ ಹಾಗೂ ಧರ್ಮಪಾಂತ್ರದ ನೀತಿ ನಿಯಮಗಳ ಪ್ರಕಾರ ಅದು ನಡೆಯುತ್ತದೆ. ಬೆಳ್ವೆಯ ಕ್ರಿಶ್ಚಿಯನ್ನರು ಈ ಬಗ್ಗೆ ತಿಳಿದಿದ್ದೂ ಅವುಗಳಿಗೆ ಗಮನ ನೀಡದೆ ಚರ್ಚ್‌ಗೆ ಸಂಬಂಧವಿಲ್ಲದ ವ್ಯಕ್ತಿಗಳಿಗೆ ತಪ್ಪು ಮಾಹಿತಿ ನೀಡಿ ಗುಂಪು ಮಾಡಿ ಪ್ರತಿಭಟಿಸಿ ಕ್ರೈಸ್ತ ಧರ್ಮ ತ್ಯಜಿಸುತ್ತೇವೆ ಎಂಬ ಬೆದರಿಕೆ ಒಡ್ಡಿದ್ದು ನಿಜಕ್ಕೂ ಬೇಸರದ ಸಂಗತಿ.
ಭಕ್ತಾದಿಗಳಿಗೆ ಪ್ರಾರ್ಥನಾ ಸೇವೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಚರ್ಚ್‌ಗೆ ಪ್ರವೇಶವನ್ನ ಯಾರೂ ನಿರ್ಬಂಧಿಸಿಲ್ಲ. ಪ್ರಸ್ತುತ ಧರ್ಮಗುರುಗಳು ಯಾವುದೇ ಸೂಚನೆಗಳನ್ನು ನೀಡಿದರೆ ಅದು ಚರ್ಚ್ ನ ನಡವಳಿಕೆಯ ಭಾಗವಾಗಿದೆ.
ಬೆಳ್ವೆ ಸೇಂಟ್ ಜೋಸೆಫ್ ಅಗ್ರಿಕಲ್ಚರಲ್ ಕಾಲೋನಿಯ ಕ್ರೈಸ್ತ ಧರ್ಮೀಯರು ಒಳಗಿನ ಮತ್ತು ಹೊರಗಿನ ಪಟ್ಟಭದ್ರ ಹಿತಾಸಕ್ತಿಗಳ ಪ್ರಭಾವಕ್ಕೆ ಯಾವುದೇ ರೀತಿಯ ಸುಳ್ಳು ಮಾಹಿತಿಗಳಿಗೆ ಬಲಿಯಾಗದಂತೆ ಮತ್ತು ಹಿಂದಿನಂತೆ ತಮ್ಮ ಕ್ರೈಸ್ತ ವಿಶ್ವಾಸಿ ನಂಬಿಕೆಯೊಂದಿಗೆ ಜೀವನ ನಡೆಸಬೇಕು ಎಂದು ಧರ್ಮ ಪಾಂತ್ರ ಆಡಳಿತ ಮಂಡಳಿ ವಿನಂತಿ ಎಂದು ಸ್ಪಷ್ಟೀಕರಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.