ಬೆಳ್ತಂಗಡಿ : ಇತ್ತೀಚಿನ ದಿನಗಳಲ್ಲಿ ಬೆಳ್ತಂಗಡಿ ತಾಲೂಕಿನಾದ್ಯಂತ ಚಿರತೆಯ ಹಾವಳಿ ಹೆಚ್ಚುತ್ತಿದ್ದು ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ದಿಡುಪೆ ಕುಂಡಾಲ್ ಮನೆ ಜಯಂತ್ ಎಂಬವರ ಮನೆಯ ಹೊರಛಾವಣಿಯಲ್ಲಿದ್ದ ಸಾಕು ನಾಯಿಯನ್ನು ಹೊತ್ತೊಯ್ದ ಘಟನೆ ಫೆ.5 ರ ಮಧ್ಯರಾತ್ರಿ ನಡೆದಿದೆ.
ತಾಲೂಕಿನಾದ್ಯಂತ ಚಿರತೆಯ ಅಟ್ಟಹಾಸಕ್ಕೆ ಸಾಕು ಪ್ರಾಣಿಗಳಾದ ನಾಯಿ, ದನಕರುಗಳು ಬಲಿಯಾಗುತ್ತಿದ್ದು, ಈವರೆಗೂ ಲಗ್ಗೆ ಇಡದ ಪ್ರದೇಶಕ್ಕೂ ಚಿರತೆ ಪ್ರವೇಶ ಮಾಡಿರುತ್ತದೆ. ದಿಡುಪೆ ಜಯಂತ್ ರವರ ಮನೆಯಿಂದ ನಾಯಿಯನ್ನು ಹೊತ್ತೊಯ್ದ ದೃಶ್ಯವು ಅವರ ಮನೆಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿದಾಡುತ್ತಿದೆ.
ಈ ಭಾಗದ ಮಕ್ಕಳು ಶಿಕ್ಷಣಕ್ಕಾಗಿ ದೂರದೂರಿನ ಶಾಲಾ ಕಾಲೇಜುಗಳಿಗೆ ಹೋಗುತ್ತಿದ್ದು, ಮರಳಿ ಮನೆಗೆ ತಲುಪುವ ಸಮಯ ರಾತ್ರಿಯಾಗುವ ಕಾರಣ, ಶೀಘ್ರದಲ್ಲೇ ಕಾಡುಪ್ರಾಣಿಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಆಗ್ರಹವನ್ನು ಮಾಡುತ್ತಿದ್ದಾರೆ.


