ಬೆಳಗಾವಿ : ಲಾಕ್ ಡೌನ್ ಬಂದೋಬಸ್ತ್ ಗಾಗಿ ಬೆಳಗಾವಿ ತಾಲೂಕಿನ ಯಳ್ಳೂರು ಗ್ರಾಮದಿಂದ ಬೈಕ್ ನಲ್ಲಿಬರುತ್ತಿದ್ದ ವೇಳೆ ನಾಯಿಗೆ ಡಿಕ್ಕಿ ಹೊಡೆವುದನ್ನು ತಪ್ಪಿಸಲು ಹೋದ ಖಡೇಬಜಾರ್ ಪೊಲೀಸ್ ಠಾಣೆ ಪಿಎಸ್ ಐ ಮನೋಹರ ಗಣಾಚಾರಿ ಅವರು ಆಯತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಖಡೇಬಜಾರ್ ಪೊಲೀಸ್ ಠಾಣೆಗೆ ಕರ್ತವ್ಯಕ್ಕೆ ಹಾಜರಾಗಲು ಪಿಎಸ್‌ಐ ಮನೋಹರ ಗಣಾಚಾರಿ ಅವರು ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಯಳ್ಳೂರು ಸಮೀಪದ ಕೆಎಲ್ ಇ ಆಸ್ಪತ್ರೆ ಬಳಿ ಇಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಬೈಕ್ ನಲ್ಲಿ ಬರುತ್ತಿದ್ದಾಗ ನಾಯಿ ಅಡ್ಡ ಬಂದಿದೆ. ಅದಕ್ಕೆ ಡಿಕ್ಕಿ ತಪ್ಪಿಸಲು ಹೋಗಿ ಸ್ಕಿಡ್ ಆಗಿ ಬಿದ್ದಿದ್ದಾರೆ. ತಲೆಗೆ ಬಲವಾದ ಪೆಟ್ಟು ಬಿದ್ದು ರಕ್ರಸ್ರಾವವಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಮನೋಹರ ಗಣಾಚಾರಿ ಅವರು ಆರು ತಿಂಗಳ ಹಿಂದಷ್ಟೇ ಬಡ್ತಿ ಹೊಂದಿ ಪಿಎಸ್‌ಐ ಆಗಿದ್ದರು. ವರ್ಷದ ಹಿಂದಷ್ಟೇ ಯಳ್ಳೂರಿನಲ್ಲಿ ಮನೆ ಕಟ್ಟಿಸಿದ್ದರು. ಮುಂದಿನ ಸೆಪ್ಟೆಂಬರ್ ತಿಂಗಳಲ್ಲಿ ನಿವೃತ್ತಿಯಾಗುವವರಿದ್ದರು. ಅಷ್ಟರೊಳಗೆ ಈ ದುರಂತ ಸಂಭವಿಸಿದೆ