ಬೆಳಗಾವಿ: ತಂದೆ ತೋಡಿದ್ದ ಕೃಷಿ ಹೊಂಡದಲ್ಲಿ ಬಿದ್ದ ಮೊಬೈಲ್ ತೆಗೆದುಕೊಳ್ಳಲು ಹೋಗಿ ನಾಲ್ಕು ಕಂದಮ್ಮಗಳು ನೀರುಪಾಲಾದ ಹೃದಯವಿದ್ರಾವಕ ಘಟನೆ ಗೋಕಾಕ ತಾಲೂಕಿನ ಅಜ್ಜನಕಟ್ಟೆ ಗ್ರಾಮದಲ್ಲಿ ಶನಿವಾರ ನಡೆದಿದೆ.
ಅಜ್ಜನಕಟ್ಟಿ ಗ್ರಾಮದ ಕರೆಪ್ಪ ಜಕ್ಕನ್ನವರ ಹಾಗೂ ಮಹಾದೇವಿ ದಂಪತಿಯ ನಾಲ್ವರು ಮಕ್ಕಳೇ ಹೀಗೆ ದುರ್ಮರಣಕ್ಕೀಡಾದ ದುರ್ದೈವಿಗಳಾಗಿದ್ದಾರೆ, ಭಾಗವ್ವ ಜಕ್ಕನ್ನವರ (6), ತಾಯಮ್ಮ ಜಕ್ಕನ್ನವರ (5) ಮಾಳಪ್ಪ ಜಕ್ಕನ್ನವರ (4) ಹಾಗೂ ರಾಜಶ್ರೀ ಜಕ್ಕನ್ನವರ (3) ಮೃತ ಕಂದಮ್ಮಗಳು.
ಕೋವಿಡ್ 19 ವೈರಸ್ ಸೋಂಕಿನ ಭೀತಿ ಹಿನ್ನಲೆಯಲ್ಲಿ ಈ ಕುಟುಂಬ ಗ್ರಾಮದಲ್ಲಿನ ಮನೆ ತೊರೆದು ತಮ್ಮ ತೋಟದ ಮನೆಗೆ ಶಿಫ್ಟ್ ಆಗಿತ್ತು. ಈ ಕಂದಮ್ಮಗಳ ತಂದೆ, ತಾಯಿ ಗ್ರಾಮದ ಮನೆಯಲ್ಲಿದ್ದರೆ ಈ ಮಕ್ಕಳು ತೋಟದ ಮನೆಯಲ್ಲಿರುವ ಅಜ್ಜ, ಅಜ್ಜಿಯ ಜೊತೆಗೆ ವಾಸಿಸುತ್ತಿದ್ದರು. ಇಂದು ಮಕ್ಕಳು ಕೃಷಿ ಹೊಂಡದ ಕಡೆಗೆ ಆಟ ಆಡುತ್ತ ಹೋಗಿದ್ದಾರೆ ಈ ಸಂದರ್ಭದಲ್ಲಿ ಮಕ್ಕಳ ಕೈಯಲ್ಲಿದ್ದ ಮೊಬೈಲ್ ನೀರಿನಲ್ಲಿ ಬಿದ್ದಿದೆ. ನೀರಿನಲ್ಲಿ ಬಿದ್ದ ಮೊಬೈಲ್ ತೆಗೆದುಕೊಳ್ಳಲು ಹೋಗಿ ಒಬ್ಬರ ಹಿಂದೆ ಒಬ್ಬರು ಬಿದ್ದು ಎಲ್ಲ ಮಕ್ಕಳು ನೀರು ಪಾಲಾಗಿವೆ ಎನ್ನಲಾಗುತ್ತಿದೆ.
ಹೀಗೆ ಮಕ್ಕಳು ಕೃಷಿ ಹೊಂಡದಲ್ಲಿ ಬಿದ್ದಿರುವುದು ಸ್ವಲ್ಪ ಸಮಯ ಯಾರಿಗೂ ಗೊತ್ತಾಗಿರುವುದಿಲ್ಲ. ಅಜ್ಜಿ ಕೃಷಿ ಹೊಂಡದ ಕಡೆಗೆ ಹೋದಾಗ ಒಂದು ಮಗು ನೀರಿನಲ್ಲಿ ಬಿದ್ದಿರುವುದು ಕಾಣಿಸಿದೆ. ಇನ್ನುಳಿದ ಮಕ್ಕಳು ಎಲ್ಲಿ ಎಂಬುದನ್ನು ಹುಡುಕಾಡಲು ಹೋದಾಗ ಉಳಿದ ಮೂರು ಮಕ್ಕಳೂ ನೀರಿನಲ್ಲಿ ಬಿದ್ದು ಮೃತಪಟ್ಟಿರುವುದು ಗೊತ್ತಾಗಿದೆ.
ಸ್ಥಳೀಯರು ಮಕ್ಕಳ ಶವಗಳನ್ನು ಕೃಷಿಹೊಂಡದಿಂದ ಹೊರ ತೆಗೆದಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು ಮತ್ತು ಘಟನೆಗೆ ಸಂಬಂಧಿಸಿದಂತೆ ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.