ಲಖ್ನೋ: ಕೋರೋನಾ ಸೋಂಕು ತಡೆಯುವ ಉದ್ದೇಶದಿಂದ ಜಾರಿಗೊಳಿಸಿರುವ 21 ದಿನಗಳ ಲಾಕ್ ಡೌನ್ ಏಪ್ರಿಲ್ 14 ಕ್ಕೆ ಮುಕ್ತಾಯವಾಗಲಿದೆ. ನಂತರದಲ್ಲಿ ಲಾಕ್ ಡೌನ್ ಮುಂದುವರೆಸುವ ಇಲ್ಲವೇ ತೆರವುಗೊಳಿಸುವ ಕುರಿತು ಚರ್ಚೆ ನಡೆದಿದೆ.
ಇದೇ ವೇಳೆ ಏಪ್ರಿಲ್ 15 ರಂದು ಲಾಕ್ ಡೌನ್ ತೆರವುಗೊಳಿಸಲಾಗುವುದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾಹಿತಿ ನೀಡಿದ್ದಾರೆ.
ಏಪ್ರಿಲ್ 15ರಂದು ಲಾಕ್ ಡೌನ್ ತೆರವುಗೊಳಿಸಲಾಗುವುದು. ಜನದಟ್ಟಣೆಯಾಗದಂತೆ ನಿಯಂತ್ರಿಸಬೇಕಾದ ದೊಡ್ಡ ಸವಾಲು ಎದುರಾಗಿದೆ. ಇಲ್ಲವಾದರೆ ಇಷ್ಟು ದಿನಗಳ ಕಾಲ ಕೈಗೊಂಡ ಎಲ್ಲ ಪ್ರಯತ್ನಗಳು ವಿಫಲವಾಗುತ್ತದೆ ಎಂದು ತಿಳಿಸಿದ್ದಾರೆ.
ಉತ್ತರಪ್ರದೇಶದ ಸಂಸದರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಯೋಗಿ ಆದಿತ್ಯನಾಥ್ ಜನ ದಟ್ಟಣೆ ನಿಯಂತ್ರಿಸಲು ಕಾರ್ಯಕ್ರಮ ರೂಪಿಸಬೇಕಿದ್ದು, ಈ ನಿಟ್ಟಿನಲ್ಲಿ ಸಲಹೆ ನೀಡುವಂತೆ ಕೇಳಿದ್ದಾರೆ. ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಏಪ್ರಿಲ್ 15 ರಂದು ಲಾಕ್ ಡೌನ್ ತೆರವುಗೊಳಿಸಲು ಉತ್ತರಪ್ರದೇಶ ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.