Sunday, May 19, 2024
Homeತಾಜಾ ಸುದ್ದಿಬೆಳ್ತಂಗಡಿಯಲ್ಲಿ ಭಾರೀ ಮಳೆ.. ಧುಮ್ಮಿಕ್ಕಿ ಹರಿಯುತ್ತಿದೆ ಎರ್ಮಾಯಿ ಫಾಲ್ಸ್

ಬೆಳ್ತಂಗಡಿಯಲ್ಲಿ ಭಾರೀ ಮಳೆ.. ಧುಮ್ಮಿಕ್ಕಿ ಹರಿಯುತ್ತಿದೆ ಎರ್ಮಾಯಿ ಫಾಲ್ಸ್

spot_img
- Advertisement -
- Advertisement -

ಬೆಳ್ತಂಗಡಿ : ಕಾನನದ ನಡುವೆ ಮೈದುಂಬಿ ಹರಿಯುವ ಜಲಪಾತಗಳ ದೃಶ್ಯ ಕಾವ್ಯವನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬದಂತೆ. ಇಂಥಹ ಹಲವು ಜಲಪಾತಗಳು ಪಶ್ಚಿಮಘಟ್ಟಗಳ ಸಾಲಿನ ಬೆಟ್ಟಗಳಿಂದ ಗಂಗೆಯಂತೆ ಶುಭ್ರವಾಗಿ ಧರೆಗಿಳಿಯುತ್ತಿದೆ. ಇಂಥಹ ಒಂದು ಜಲಪಾತ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿದೆ.

ಶುಭ್ರವಾಗಿ ಗಿರಿಯ ಮೇಲಿಂದ ಧರೆಗೆ ಭೋರ್ಗರೆದು ಹರಿಯುತ್ತಿರೋದು ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ದಿಡುಪೆ ಸಮೀಪವಿರುವ ಎರ್ಮಾಯಿ ಜಲಪಾತ. ಸುಮಾರು 120 ಅಡಿ ಎತ್ತರದಿಂದ ಧುಮ್ಮಿಕ್ಕಿ ಹರಿಯುವ ಈ ಜಲಪಾತ ಪ್ರಕೃತಿ ಪ್ರಿಯರ ಸುಂದರ ತಾಣವೂ ಆಗಿದೆ. ಕಾಡು ರಸ್ತೆಯ ಮೂಲಕ ಈ ಜಲಪಾತವನ್ನು ನೋಡಲು ಸಾಗಬೇಕಿದ್ದು, ಕಾಲ್ನಡಿಗೆಯಲ್ಲಿ ಆದ ಸುಸ್ತು ಈ ಜಲಪಾತವನ್ನು ನೋಡಿದಾಗ ಮಾಯವಾಗಿ ಬಿಡುತ್ತದೆ. ಅಂಥಹ ಸೌಂದರ್ಯದ ಮಾಯಾಂಗನೆ ಈ ಎರ್ಯಾಯಿ ಜಲಪಾತವಾಗಿದ್ದು, ನೋಡಿದಷ್ಟೂ ತೀರದ ದಾಹ ಅನುಭವ ಈ ಜಲಪಾತವನ್ನು ನೋಡಿದಾಗ ಅರಿವಿಗೆ ಬರುತ್ತದೆ. ಎರ್ಯಾಯಿ ಎಂದರೆ ಸ್ಥಳೀಯ ಭಾಷೆಯ ಪ್ರಕಾರ ಎತ್ತುಗಳು ಮಾಯವಾದ ಪ್ರದೇಶ ಎಂದರ್ಥ.

ಹಿಂದೆ ಮೇಯಲು ಬಂದ ಎತ್ತುಗಳು ಇದೇ ಪ್ರದೇಶದಲ್ಲಿ ಮಾಯವಾದ ಕಾರಣ ಈ ಸ್ಥಳಕ್ಕೆ ಎರ್ಮಾಯಿ ಎನ್ನುವ ಹೆಸರು ಬಂದಿದೆ. ಈ ಜಲಪಾತವಲ್ಲದೆ, ಇದರ ಮೇಲೆ ಇನ್ನೂ ಏಳು ಜಲಪಾತಗಳು ಹರಿಯುತ್ತಿದೆ. ಸೌಂದರ್ಯದಲ್ಲಿ ಒಂದಕ್ಕಿಂತ ಒಂದು ಮಿಗಿಲಾಗಿದೆ. ದೂರದ ಊರುಗಳಿಂದ ಈ ಜಲಪಾತದ ವೀಕ್ಷಣೆಗಾಗಿ ಬರುವ ಪ್ರವಾಸಿಗರ ಜೊತೆಗೆ ಕೆಲವು ವಿಕೃತ ಮನಸ್ಸುಗಳೂ ಇತ್ತ ಹರಿದಾಡುತ್ತಿವೆ.

ಜಲಪಾತ ವೀಕ್ಷಣೆಯ ನೆಪದಲ್ಲಿ ಮದ್ಯದ ಬಾಟಲಿಗಳ ಜೊತೆ ಇಲ್ಲಿಗೆ ಬರುತ್ತಿದ್ದು, ಕುಡಿದು ಮಜಾ ಉಡಾಯಿಸುವುದರ ಜೊತೆ ತಮ್ಮ ಜೊತೆ ತಂದು ಪ್ಲಾಸ್ಟಿಕ್ ಹಾಗೂ ಬಾಟಲಿಗಳನ್ನೂ ಚೆಲ್ಲಿ ವಿಕೃತಿ ಮೆರೆಯುತ್ತಿದ್ದಾರೆ. ಇದರಿಂದಾಗಿ ಪ್ರಕೃತಿಯನ್ನು ಆಸ್ವಾದಿಸಲು ಬರುವ ಪ್ರವಾಸಿಗರಿಗೆ ಅಸಹ್ಯಕರ ವಾತಾವರಣ ನಿರ್ಮಾಣವಾಗುತ್ತಿದ್ದು, ಪೋಲೀಸ್ ಇಲಾಖೆ ಮತ್ತು ಅರಣ್ಯ ಇಲಾಖೆ ಇತ್ತ ಗಮನ ಹರಿಸಬೇಕು ಎನ್ನುವ ಒತ್ತಾಯವೂ ಕೇಳಿ ಬರುತ್ತಿದೆ.

ಪ್ರಕೃತಿಯ ಸುಂದರ ರಮಣೀಯ ತಾಣಗಳು ಇತ್ತೀಚಿನ ದಿನಗಳಲ್ಲಿ ಸ್ವೇಚ್ಛಾಚಾರದ ತಾಣಗಳಾಗಿ ಬದಲಾಗುತ್ತಿರುವುದು ದುರಂತವಾಗಿದೆ. ಪ್ಲಾಸ್ಟಿಕ್ ಸೇರಿದಂತೆ ಕಲ್ಮಶಗಳನ್ನೂ ಪ್ರಕೃತಿಯ ಬುಡಕ್ಕೇ ಹಾಕುವ ಪ್ರಯತ್ನಗಳನ್ನು ಸಂಬಂಧಪಟ್ಟ ಇಲಾಖೆಗಳು ತಡೆಯಬೇಕಿದೆ. ಕೊರೊನಾ ದಿಂದ ಸದ್ಯ ಪ್ರವಾಸಿಗರಿಗೆ ಈ ಪ್ರದೇಶಕ್ಕೆ ನಿರ್ಬಂಧ ಇದೆ. ಹೀಗಾಗಿ ಈ ಬಾರಿ ಎರ್ಮಾಯಿ ಜಲಪಾತದ ಸೌಂದರ್ಯ ಇಮ್ಮಡಿಯಾಗಿದೆ.

- Advertisement -
spot_img

Latest News

error: Content is protected !!