ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್.ರಾಜೇಂದ್ರಕುಮಾರ್ ಅವರ ನಿರ್ದೇಶನದಂತೆ ಕೋವಿಡ್ ಸಂದರ್ಭ ಹಗಲಿರುಳು ಶ್ರಮಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಆಶಾ ಕಾರ್ಯಕರ್ತೆಯರು, ನವೋದಯ ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ಕಾರ್ಯನಿರತ ಪತ್ರಕರ್ತರಿಗೆ ಆಹಾರ ಸಾಮಗ್ರಿಗಳ ಕಿಟ್ ಅನ್ನು ವಿತರಿಸುವ ಕಾರ್ಯಕ್ರಮದ ಅಂಗವಾಗಿ ಬಿ.ಸಿ.ರೋಡಿನ ಎಸ್.ಜಿ.ಎಸ್.ವೈ. ಸಭಾಂಗಣದಲ್ಲಿ ಸೋಮವಾರ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ಮೂಲಕ ಸಾಂಕೇತಿಕವಾಗಿ ವಿತರಿಸಲಾಯಿತು.
ಈಗಾಗಲೇ ಮಂಗಳೂರು ಸಹಿತ ಜಿಲ್ಲೆಯ ಇತರ ತಾಲೂಕುಗಳಲ್ಲಿ ಈ ಕಾರ್ಯಕ್ರಮ ನಡೆದಿದ್ದು, ಸೋಮವಾರ ಬಂಟ್ವಾಳದಲ್ಲಿ ಕಾರ್ಯಕ್ರಮ ನಡೆದಿದ್ದು, ಒಟ್ಟು 439 ಮಂದಿಗೆ ಕಿಟ್ ವಿತರಿಸಲಾಯಿತು.
ಈ ಸಂದರ್ಭ ಮಾತನಾಡಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಕೊರೊನಾ ಮಾರಿಯನ್ನು ಹೊಡೆದೊಡಿಸಲು ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡುತ್ತಿರುವ ಆಶಾ ಕಾರ್ಯಕರ್ತೆಯರ ಸೇವೆಗೆ ಈ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ. ಇಂತಹ ಸೇವಾ ಮಹೋಭಾವ ಹೊಂದಿರುವ ಡಾ. ರಾಜೇಂದ್ರಕುಮಾರ್ ಅವರಿಗೆ ಕೃತಜ್ಞತೆಗಳು. ಈಗ ನಮ್ಮ ವೈರಿ ಕೊರೊನಾ ಮಾತ್ರ. ನಾವೆಲ್ಲರೂ ಜತೆಯಾಗಿ ಕೊರೊನಾ ವಿರುದ್ಧ ಹೋರಾಡೋಣ ಎಂದರು.
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಟಿ.ಜಿ.ರಾಜಾರಾಮ ಭಟ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸ್ತುತ ಎಲ್ಲರ ಆರೋಗ್ಯದ ಹೊಣೆ ಆಶಾ ಕಾರ್ಯಕರ್ತೆಯರ ಮೇಲಿದ್ದು, ಅವರು ತಮ್ಮ ಕಾರ್ಯವನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಡಾ| ಎಂ.ಎನ್. ಅವರು ಸಹಕಾರಿ ಕ್ಷೇತ್ರದ ಜತೆಗೆ ಸಾಮಾಜಿಕ ಕಳಕಳಿಯ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ಇದೇ ವೇಳೆ ಆಶಾ ಕಾರ್ಯಕರ್ತೆಯರ ಬ್ಯಾಂಕ್ ಖಾತೆಗೆ ತಲಾ 1 ಸಾವಿರ ರೂಗಳನ್ನು ಎಸ್.ಸಿ.ಡಿ.ಸಿ.ಸಿ .ಬ್ಯಾಂಕ್ ವತಿಯಿಂದ ಡಾ.ರಾಜೇಂದ್ರ ಕುಮಾರ್ ನಿರ್ದೇಶನದಂತೆ ನೀಡುವ ಕುರಿತು ಟಿ.ಜಿ.ರಾಜಾರಾಮ ಭಟ್ ಪ್ರಕಟಿಸಿ, ಬ್ಯಾಂಕ್ ಹಲವು ಹಂತಗಳಲ್ಲಿ ಸಾಮಾಜಿಕವಾಗಿ ಸ್ಪಂದಿಸುತ್ತಿದ್ದು, ಆಶಾ ಕಾರ್ಯಕರ್ತೆಯರ ಕಾರ್ಯಕ್ಕೆ ತನ್ನ ಕೊಡುಗೆಯನ್ನು ನೀಡುತ್ತಿದೆ ಎಂದು ತಿಳಿಸಿದರು.