ಹಿಜಾಬ್ ಪ್ರಕರಣದಲ್ಲಿ ರಾಜ್ಯ ಹೈಕೋರ್ಟ್ ನೀಡಿರುವ ತೀರ್ಪನ್ನು ವಿರೋಧಿಸಿ ರಾಜ್ಯದ ಮುಸ್ಲಿಂ ಸಂಘಟನೆಗಳು ಇಂದು ರಾಜ್ಯಾದ್ಯಂತ ಒಂದು ದಿನದ ಬಂದ್‌ಗೆ ಕರೆ ನೀಡಿವೆ.
ಹಿಜಾಬ್ ಧರಿಸುವ ವಿದ್ಯಾರ್ಥಿಗಳನ್ನು ಶಾಲಾ-ಕಾಲೇಜುಗಳಿಗೆ ಬರದಂತೆ ನಿರ್ಬಂಧಿಸಿದ ಶಿಕ್ಷಣ ಸಂಸ್ಥೆಗಳ ಒತ್ತಾಯದ ವಿರುದ್ಧ ಹೈಕೋರ್ಟ್‌ಗೆ ಹೋದ ವಿದ್ಯಾರ್ಥಿಗಳಿಗೆ ಸಂಘಟನೆಗಳು ಸಂಪೂರ್ಣ ಬೆಂಬಲ ನೀಡಿದೆ.
ಮುಸ್ಲಿಂ ಸಂಘಟನೆಗಳ ಒಕ್ಕೂಟವು ಗುರುವಾರ ತಮ್ಮ ಅಂಗಡಿಗಳನ್ನು ಮುಚ್ಚುವಂತೆ ಮುಸ್ಲಿಂ ಉದ್ಯಮಿಗಳಿಗೆ ಕರೆ ನೀಡಿತ್ತು. ಜನರು ತಮ್ಮ ಮನೆಗಳಿಂದ ಹೊರಗೆ ಬರದಂತೆ, ತಮ್ಮ ಅಂಗಡಿಗಳು ಮತ್ತು ಇತರ ಸಂಸ್ಥೆಗಳನ್ನು ಮುಚ್ಚಲು ತಿಳಿಸಿದೆ. ಶಾಂತಿಯುತ ಪ್ರತಿಭಟನೆಯನ್ನು ಮಾತ್ರ ಮಾಡುವಂತೆ ಹೇಳಿದೆ.
ಮಂಗಳೂರು ನಗರದ ಸ್ಟೇಟ್ ಬ್ಯಾಂಕ್ ಮತ್ತು ಸೆಂಟ್ರಲ್ ಮಾರುಕಟ್ಟೆ ಪ್ರದೇಶಗಳು ನಿರ್ಜನವಾಗಿ ಕಂಡಿದೆ ಹಾಗೂ ವಾಹನಗಳ ಸಂಚಾರ ಬಹಳ ಸೀಮಿತವಾಗಿದ್ದು, ಬೆರಳೆಣಿಕೆಯಷ್ಟು ಬಸ್‌ಗಳು ಮಾತ್ರ ಸಂಚರಿಸುತ್ತಿವೆ.
ಬಂದ್‌ಗೆ ಉಡುಪಿಯಲ್ಲಿ ಭಾಗಶಃ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿಟಿ ಬಸ್ ನಿಲ್ದಾಣದ ಬಳಿ ಅಂಗಡಿಗಳನ್ನು ಹೊಂದಿರುವ ಕೆಲ ವ್ಯಾಪಾರಿಗಳು ಮಾತ್ರ ಶಟರ್ ಇಳಿಸಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಮುಖ್ಯವಾಗಿ ಪಾದರಕ್ಷೆಗಳ ವ್ಯಾಪಾರ ಹೊಂದಿರುವವರು ತಮ್ಮ ಅಂಗಡಿಗಳನ್ನು ಮುಚ್ಚಿದ್ದಾರೆ.
ಕೆಲವು ಮುಸ್ಲಿಂ ಅಂಗಡಿ ಮಾಲೀಕರು ಅಂಗಡಿಗಳನ್ನು ಮುಚ್ಚಬೇಕೋ ಬೇಡವೋ ಎಂಬ ಗೊಂದಲದಲ್ಲಿದ್ದಾರೆ. ಮುಸ್ಲಿಮರ ಅಂಗಡಿಗಳ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.


